ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಂಧಿ ಕುಟುಂಬದ ಒಳಗಿನ ಸಂಬಂಧಗಳ ಏರಿಳಿತ, ಭಿನ್ನಾಭಿಪ್ರಾಯ ಮತ್ತು ರಾಜಕೀಯ ಸಂಘರ್ಷಗಳ ಕುರಿತು ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಹಲವು ಮಹತ್ವದ ಸಂಗತಿಗಳನ್ನು ದಾಖಲಿಸಿದ್ದಾರೆ.
ಇದೀಗ ಬಿಡುಗಡೆಯಾಗಿರುವ ‘Belonging: A Journey Of Love’ ಪುಸ್ತಕದಲ್ಲಿ ಸಂಜಯ್ ಗಾಂಧಿ ಅವರ ಪತ್ನಿ ಮನೇಕಾ ಗಾಂಧಿ ಕುಟುಂಬಕ್ಕೆ ಬಂದ ದಿನಗಳಿಂದ ಹಿಡಿದು, ಇಂದಿರಾ ಗಾಂಧಿ ಅವರ ಮನೆಯಿಂದ ಹೊರಹೋಗುವವರೆಗಿನ ಘಟನೆಗಳನ್ನು ಸೋನಿಯಾ ವಿವರಿಸಿದ್ದಾರೆ. ಆರಂಭದಲ್ಲಿ ಆತ್ಮೀಯವಾಗಿದ್ದ ಇಬ್ಬರು ಸೊಸೆಯಂದಿರ ಸಂಬಂಧ ಕ್ರಮೇಣ ಹೇಗೆ ಹದಗೆಟ್ಟಿತು ಎಂಬುದನ್ನೂ ಬರೆದಿದ್ದಾರೆ.
ನಗುವಿನಿಂದ ಆರಂಭವಾದ ಆತ್ಮೀಯತೆ
1973ರ ಕೊನೆಯ ಭಾಗದಲ್ಲಿ ಸಂಜಯ್ ಗಾಂಧಿಗೆ ಮನೇಕಾ ಪರಿಚಯವಾದರು. ಆಗ ಮನೇಕಾ ವಯಸ್ಸು ಕೇವಲ 18 ವರ್ಷ. ಮದುವೆಯ ಬಳಿಕ ಅವರು ಗಾಂಧಿ ಕುಟುಂಬದ ಕಿರಿಯ ಸೊಸೆಯಾಗಿ ಮನೆ ಪ್ರವೇಶಿಸಿದರು. ಆರಂಭದಲ್ಲಿ ಮನೇಕಾ ಅವರ ಉತ್ಸಾಹಭರಿತ ಮಾತು, ನಗು ಮತ್ತು ಚಟುವಟಿಕೆಗಳು ಮನೆಯಲ್ಲಿ ಹೊಸ ಕಳೆ ತಂದಿದ್ದವು ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.
‘ಬಹುರಾಣಿ’, ‘ಚೋಟಿ ಬಹು’ ವಿವಾದ
ಮನೆಯಲ್ಲಿ ಸೋನಿಯಾ ಅವರನ್ನು ‘ಬಹುರಾಣಿ’ ಎಂದೂ, ಮನೇಕಾ ಅವರನ್ನು ‘ಚೋಟಿ ಬಹು’ ಎಂದೂ ಕರೆಯಲಾಗುತ್ತಿತ್ತು. ಇಬ್ಬರನ್ನೂ ಸಮಾನವಾಗಿ ನೋಡುತ್ತಿದ್ದರೂ, ಈ ಸಂಬೋಧನೆಯನ್ನು ಮನೇಕಾ ಅವಮಾನವಾಗಿ ಭಾವಿಸಿರಬಹುದು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ದಿನಗಳು ಕಳೆದಂತೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೊಡ್ಡದಾಗಿ, ಸಂಜಯ್ ಮತ್ತು ಮನೇಕಾ ನಡುವಿನ ವಾಗ್ವಾದವೂ ಹೆಚ್ಚಾಯಿತು ಎಂದು ಬರೆದಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯದಿಂದ ಹೆಚ್ಚಿದ ಅಂತರ
1977ರಲ್ಲಿ ಕಾಂಗ್ರೆಸ್ ಸೋಲಿನ ಬಳಿಕ ಸಂಜಯ್ ಅವರ ರಾಜಕೀಯ ನಡೆ ಮತ್ತು ಮಹತ್ವಾಕಾಂಕ್ಷೆಗಳ ಬಗ್ಗೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಿತು. ಮನೇಕಾ ಅವರ ಪ್ರಭಾವದಿಂದ ಸಂಜಯ್ ಮತ್ತು ರಾಜೀವ್ ನಡುವಿನ ಸಂಬಂಧವೂ ಹದಗೆಟ್ಟಿತ್ತು ಎಂದು ಸೋನಿಯಾ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:
ಸಂಜಯ್ ನಿಧನದ ಬಳಿಕ ಸಂಬಂಧದಲ್ಲಿ ಬಿರುಕು
1980ರಲ್ಲಿ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಮೃತಪಟ್ಟ ಬಳಿಕ ಮನೇಕಾ ಅವರ ರಾಜಕೀಯ ಭವಿಷ್ಯದ ವಿಚಾರವಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ತೀವ್ರವಾಯಿತು. 1981ರಲ್ಲಿ ಮಗ ವರುಣ್ ಅವರ ಮೊದಲ ಹುಟ್ಟುಹಬ್ಬದ ಆಚರಣೆ ಸೇರಿದಂತೆ ಹಲವು ಘಟನೆಗಳ ಬಳಿಕ ಇಂದಿರಾ ಗಾಂಧಿ ಮತ್ತು ಮನೇಕಾ ನಡುವೆ ಸಂಘರ್ಷ ಉಂಟಾಯಿತು. ಕೊನೆಗೆ ಮನೇಕಾ ಮನೆ ತೊರೆದರು.
ಕುಟುಂಬದೊಳಗಿನ ಕಹಿ ನೆನಪುಗಳು ಮತ್ತೆ ಚರ್ಚೆಗೆ
ದಶಕಗಳ ಹಿಂದೆ ನಡೆದ ಈ ಘಟನೆಗಳನ್ನು ಸೋನಿಯಾ ತಮ್ಮ ಆತ್ಮಕಥನದಲ್ಲಿ ನೆನಪಿಸಿಕೊಂಡಿರುವುದು ಗಾಂಧಿ ಕುಟುಂಬದ ಇತಿಹಾಸದ ಮತ್ತೊಂದು ಮುಖವನ್ನು ಮುನ್ನೆಲೆಗೆ ತಂದಿದೆ. ಆರಂಭದ ಆತ್ಮೀಯತೆ ರಾಜಕೀಯ ಮಹತ್ವಾಕಾಂಕ್ಷೆ ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳ ನಡುವೆ ಹೇಗೆ ಕಹಿ ಸಂಬಂಧವಾಗಿ ಬದಲಾಯಿತು ಎಂಬುದು ಈಗ ಮತ್ತೆ ಚರ್ಚೆಯಾಗುತ್ತಿದೆ.



