ಮಾಹಿತಿ ರಕ್ಷಣೆಯ ಮಸೂದೆಯನ್ನು ಸರ್ಕಾರ ಹಿಂದಕ್ಕೆ ಪಡೆದುಕೊಂಡಿತೇಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಂತ್ರಜ್ಞಾನ ಯುಗದಲ್ಲಿ ಕೆಲವೊಂದು ವಿಚಾರಗಳಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳೇ ಸರ್ಕಾರಕ್ಕಿಂತ ಹೆಚ್ಚಿನ ರೀತಿಯಲ್ಲಿ ಜನರ ಮೇಲೆ ನಿಯಂತ್ರಣ ಹೊಂದುತ್ತಿರುವುದು ಇವತ್ತಿನ ಹೊಸ ಬೆಳವಣಿಗೆ. ಇದನ್ನು ನಿಯಂತ್ರಣಕ್ಕೆ ಒಳಪಡಿಸುವುದಕ್ಕೆ ಅಮೆರಿಕ ಸೇರಿದಂತೆ ಬಹಳಷ್ಟು ದೇಶಗಳು ಹೊಸ ಕಾಯ್ದೆಗಳನ್ನು ತರುತ್ತಿವೆ. ಭಾರತವೂ ಸಹ ಈ ನಿಟ್ಟಿನಲ್ಲಿ, ಐದು ವರ್ಷಗಳ ಅಧ್ಯಯನ-ತಯಾರಿಗಳೊಂದಿಗೆ, ವೈಯಕ್ತಿಕ ಮಾಹಿತಿ ರಕ್ಷಿಸುವ ಮಸೂದೆಯೊಂದನ್ನು ಸಿದ್ಧಪಡಿಸಿತ್ತು. ಆದರೀಗ ಅದನ್ನು ಸರ್ಕಾರ ಹಿಂಪಡೆದಿದ್ದು, ಹೊಸ ಮಸೂದೆಯೊಂದಿಗೆ ಬರುವುದಾಗಿ ಹೇಳಿದೆ.

ವೈಯುಕ್ತಿಕ ಮಾಹಿತಿ ರಕ್ಷಣಾ ಮಸೂದೆಯನ್ನು ಕೇಂದ್ರ ಸರ್ಕಾರ ಬುಧವಾರ ಹಿಂಪಡೆದಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಮಸೂದೆಯನ್ನು ಹಿಂತೆಗೆದುಕೊಳ್ಳುವ ಪ್ರಸ್ತಾಪವನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿ ಮತದ ಮೂಲಕ ಮಸೂದೆಯನ್ನು ಹಿಂಪಡೆಯಲಾಗಿದೆ.

ಕೇಂದ್ರ ಸರ್ಕಾರ ಮಸೂದೆಯನ್ನು ಹಿಂಪಡೆದಿದ್ದೇಕೆ ?

  • ಮಸೂದೆಯ ಕೆಲವು ಷರತ್ತುಗಳ ಅಡಿಯಲ್ಲಿ ಮುಕ್ತವಾಗಿ ಡೇಟಾವನ್ನು ಪಡೆಯಲು ಕೇಂದ್ರ ಏಜೆನ್ಸಿಗಳಿಗೆ ಅತಿಯಾದ ಅಧಿಕಾರವನ್ನು ನೀಡಲಾಗಿದೆ ಎಂಬ ವಾದವನ್ನಿಟ್ಟು ಹಲವರು ವಿರೋಧಿಸಿದ್ದಾರೆ.
  • ವೈಯಕ್ತಿಕ ಗೌಪ್ಯತೆಯ ಮೇಲಿನ ಡೇಟಾ ಕಾನೂನಿನ ಅಡಿಯಲ್ಲಿ ವೈಯಕ್ತಿಕವಲ್ಲದ ಡೇಟಾದ ಅಂಶಗಳನ್ನು ನಿರ್ವಹಿಸುವುದನ್ನು ಹಲವರು ಆಕ್ಷೇಪಿಸಿದ್ದಾರೆ
  • ಕೆಲ ವೈಯುಕ್ತಿಕ ದತ್ತಾಂಶಗಳನ್ನು ಭಾರತದಲ್ಲಿ ಸಂಗ್ರಹಿಸಿ ಸ್ಥಳೀಯವಾಗಿ ಶೇಖರಿಸಿಸಬೇಕು ಮತ್ತು ಆ ಮಾಹಿತಿಗಳು ಭಾರತವನ್ನು ಬಿಟ್ಟು ಹೊರಹೋಗುವಂತಿಲ್ಲ ಎಂದು ಮಸೂದೆಯು ಹೇಳುತ್ತದೆ. ಇದನ್ನು ಅಂತರ್ಜಾಲ ದಿಗ್ಗಜ ಕಂಪನಿಗಳಾದ ಮೆಟಾ, ಗೂಗಲ್ ಮತ್ತು ಅಮೆಜಾನ್ ಗಳು ವಿರೋಧಿಸಿವೆ.
  • ಡೇಟಾ ನಿಯಮ ಉಲ್ಲಂಘನೆಗಾಗಿ ಸಾಮಾಜಿಕ ಮಾಧ್ಯಮ, ನೆಟ್ ಅಥವಾ ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್ ಕಂಪನಿಗಳು ಕಾನೂನು ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬಹುದು ಎಂದು ಮಸೂದೆಯು ಪ್ರಸ್ತಾಪಿಸಿದೆ. ಇದನ್ನು ಹಲವು ಸಾಮಾಜಿಕ ಮಾಧ್ಯಮ, ನೆಟ್ ಅಥವಾ ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್ ಕಂಪನಿಗಳ ಸ್ವತಂತ್ರ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕರಲ್ಲದ ನಿರ್ದೇಶಕರು ಟೀಕಿಸಿದ್ದಾರೆ.
  • ಇವೆಲ್ಲದರ ಜತೆ, 99 ಸೆಕ್ಶನ್ ಗಳಿರುವ ಮಸೂದೆಯಲ್ಲಿ ಬರೋಬ್ಬರಿ 81 ತಿದ್ದುಪಡಿಗಳನ್ನು ಸೂಚಿಸಿದೆ ಜಂಟಿ ಸಂಸದೀಯ ಸಮಿತಿ. ಇಷ್ಟೆಲ್ಲ ತಿದ್ದುಪಡಿಗಳನ್ನು ಚರ್ಚಿಸುವುದಕ್ಕಿಂತ ಹೊಸ ಮಸೂದೆಯನ್ನೇ ರಚಿಸಿ, ಸಾರ್ವಜನಿಕರ ಅವಗಾಹನೆಗೆ ತಂದು, ಅವರ ಸಲಹೆ-ಸೂಚನೆಗಳ ಕ್ರೋಢೀಕರಣದ ನಂತರವೇ ಸಂಸತ್ತಿನ ಮುಂದೆ ತರೋಣ ಎಂಬ ವಿಚಾರ ಸರ್ಕಾರದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!