September 30, 2026
Wednesday, September 30, 2026
spot_img

ನಾಳೆಯಿಂದ ಮೆಟ್ರೋ ಟಿಕೆಟ್‌ ದರ ಏರಿಕೆ ಆಗುತ್ತಾ? ಬಿಎಂಆರ್‌ಸಿಎಲ್‌ ಏನು ಹೇಳಿದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಟ್ರೋ ಟಿಕೆಟ್‌ ದರ ಏರಿಕೆ ವಿಚಾರ ರಾಜಕೀಯ ವಾಕ್ ಸಮರಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್‌ ಅವರ ಸೂಚನೆ ಮೇರೆಗೆ ದರ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದರು. ಆದರೆ, ಇದೀಗ ಬಿಎಂಆರ್​​ಸಿಎಲ್​​ ಮಾತ್ರ ನಾಳೆಯಿಂದಲೇ ದರ ಏರಿಕೆ ಆಗುವುದು ಖಚಿತ ಎಂದು ತಿಳಿಸಿದೆ.

ಸೋಮವಾರದಿಂದ ಪರಿಷ್ಕೃತ ಟಿಕೆಟ್‌ ದರ ಜಾರಿಯಾಗುವುದಾಗಿ ಬಿಎಂಆರ್‌ಸಿಎಲ್‌ ಇತ್ತೀಚೆಗೆ ಸ್ಪಷ್ಟಪಡಿಸಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಎಂಆರ್‌ಸಿಎಲ್‌ ಎಂಡಿ ರವಿಶಂಕರ್ ಅವರು, ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ಅಧಿಸೂಚನೆ ಬಾರದ ಕಾರಣ ಮೆಟ್ರೋ ಟಿಕೆಟ್‌ ದರ ಏರಿಕೆಗೆ ಸದ್ಯ ತಡೆಯಿಲ್ಲ. ಆದಾಗ್ಯೂ, ಒಂದು ವೇಳೆ, ತುರ್ತಾಗಿ ದರ ಏರಿಕೆ ನಿಲ್ಲಿಸುವಂತೆ ಆದೇಶ ಬಂದರೆ ಮಾತ್ರ ಈ ನಿರ್ಧಾರಕ್ಕೆ ಬ್ರೇಕ್ ಬೀಳಲಿದೆ ಎಂದು ತಿಳಿಸಿದ್ದಾರೆ.

ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರ ತಡೆ ನೀಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಶನಿವಾರ ತಿಳಿಸಿದ್ದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಸುದೀರ್ಘವಾಗಿ ಫೋನ್ ಮೂಲಕ ಚರ್ಚಿಸಿದ್ದರು.

ಮೆಟ್ರೋ ದರ ಏರಿಕೆಯಲ್ಲಿ ಶೇಕಡಾ 5 ರಷ್ಟು ದರ ಹೆಚ್ಚಳವಾಗಬಹುದು. ಕನಿಷ್ಠ 1 ರೂಪಾಯಿಂದ 5 ರೂಪಾಯಿವರೆಗೂ ಬದಲಾವಣೆಯಾಗಬಹುದು. ಅಂದರೆ ಸದ್ಯ ಕನಿಷ್ಠ ಮೆಟ್ರೋ ದರ 10 ರೂಪಾಯಿ ಇದ್ದು, 11 ರೂಪಾಯಿಗೆ ಏರಿಕೆಯಾಗಬಹುದು. ಅಲ್ಲದೆ, ಮೆಟ್ರೋ ಗರಿಷ್ಠ ಟಿಕೆಟ್‌ ದರ 90 ರೂಪಾಯಿ ಇದ್ದು, ದರ ಏರಿಕೆಯ ಬಳಿಕ 95 ರೂಪಾಯಿ ಆಗಬಹುದು ಎಂದು ತಿಳಿದುಬಂದಿದೆ.

Must Read