ಇವತ್ತು ಮನೆಯವರೆಲ್ಲ ಏಳೋ ಮುನ್ನವೇ ಚಂದದೊಂದು ಪಲಾವ್ ಮಾಡಿಬಿಡೋಣ ಎಂದು ಎದ್ದಿರುತ್ತೀರಿ. ಕಷ್ಟಪಟ್ಟು ಈರುಳ್ಳಿ, ಟೊಮ್ಯಾಟೊ, ಬೀನ್ಸ್, ಕ್ಯಾರೆಟ್, ಆಲೂಗಡ್ಡೆ ಹೆಚ್ಚಿರುತ್ತೀರಿ, ಯಾರಿಗೂ ಸದ್ದಾಗದಂತೆ ಮಿಕ್ಸಿಗೆ ಮಸಾಲೆ ಹಾಕಿ ರುಬ್ಬಿರುತ್ತೀರಿ. ತುಂಬಾ ಪ್ರೀತಿಯಲ್ಲಿ ಕುಕ್ಕರ್‌ಗೆ ಒಗರಣೆ ಹಾಕಿ, ಮಸಾಲೆ ಹಾಕಿ, ತರಕಾರಿ ಹಾಕಿ, ತೊಳೆದಿಟ್ಟ ಅಕ್ಕಿಯನ್ನೂ ಹಾಕಿರುತ್ತೀರಿ. ಮುಂದಿನ ಸ್ಟೆಪ್ ಸ್ವಲ್ಪ ಧೈರ್ಯಗೆಡಿಸುತ್ತದೆ. ಎಷ್ಟು ನೀರು ಹಾಕೋದು? ಒಂದು ಲೋಟ ಅಕ್ಕಿಗೆ ಎರಡು ಲೋಟ ಪರ್ಫೆಕ್ಟ್ ಆದರೆ ಅನ್ನ ಸ್ವಲ್ಪವೂ ಗಟ್ಟಿ ಆಗ್ಬಾರ್ದು, ಬಟ್ ಎಕ್ಸ್ಟಾ ನೀರು ಹಾಕಿದ್ರೆ ಪಲಾವ್ ಪೊಂಗಲ್ ಆಗೋದು ಗ್ಯಾರಂಟಿ!
ಅವರ ಕನ್ಫ್ಯೂಷನ್ ಅವರಿಗೆ ಬಿಡಿ, ನೀವು ಕುಕ್ಕರ್ ಬಿಟ್ಟು ದೊಡ್ಡ ಪಾತ್ರೆಯಲ್ಲಿ ಪಲಾವ್, ಬಿರಿಯಾನಿ, ಇನ್ಯಾವುದೇ ರೈಸ್ ಐಟಂ ಮಾಡಬೇಕೆಂದರೂ ಅದರಲ್ಲೇ ಮಾಡಿ. ಇದು ನಿಮ್ಮ ಅಡುಗೆಗೆ ಎಕ್ಸ್ಟ್ರಾ ರುಚಿಯನ್ನು ನೀಡುತ್ತದೆ. ನೀವು ಯಾವುದೇ ದೊಡ್ಡ ರೆಸ್ಟೋರೆಂಟ್‌ಗೆ ಹೋಗಿ ಅಥವಾ ಸಣ್ಣ ಹೊಟೇಲ್‌ಗೆ, ಎಲ್ಲಿಯೂ ನಿಮಗೆ ಕುಕ್ಕರ್ ಕಾಣಿಸೋದಿಲ್ಲ. ಪಾತ್ರೆಯಲ್ಲಿಯೇ ಮಾಡೋಕೆ ಇಷ್ಟ ಬಟ್ ಬರೋದಿಲ್ಲ ಅನ್ನೋರು ಮಿಸ್ ಮಾಡದೇ ಈ ಟಿಪ್ಸ್ ಬಗ್ಗೆ ತಿಳಿದುಕೊಳ್ಳಿ..
ಹೇಗೆ ಮಾಡೋದು?
ಮೊದಲು ದೊಡ್ಡ ಪಾತ್ರೆಗೆ ಎಣ್ಣೆ, ಮಸಾಲೆ ಪದಾರ್ಥಗಳು, ಈರುಳ್ಳಿ ಎಲ್ಲ ಹಾಕಿ ಬಾಡಿಸಿಕೊಳ್ಳಿ, ಆನಂತರ ನಿಮ್ಮ ತರಕಾರಿ ಹಾಗೂ ರುಬ್ಬಿದ ಪೇಸ್ಟ್ ಹಾಕಿ. ಈ ಪೇಸ್ಟ್ ಎಣ್ಣೆ ಬಿಡುವವರೆಗೂ ಒಲೆ ಸಣ್ಣ ಉರಿಯಲ್ಲೇ ಇರಲಿ.
ಆನಂತರ ಅಕ್ಕಿ ಹಾಕಿದಮೇಲೆ ಮಾಮೂಲಿಯಾಗಿ ಒಂದಕ್ಕೆ ಎರಡು ಲೋಟ ನೀರಿನಂತೆ ತೆಗೆದಿಡಿ, ಜೊತೆಗೆ ಇನ್ನರ್ಧ ಅಥವಾ ಮುಕ್ಕಾಲು ಕಪ್ ಎಕ್ಸ್ಟ್ರಾ ನೀರನ್ನು ಹಾಕೋದು ಮರೆಯಬೇಡಿ.
ಪಾತ್ರೆಯ ಉರಿಯನ್ನು ಈಗ ದೊಡ್ಡದು ಮಾಡುವ ಸಮಯ. ಇನ್ನೇನು ನಿಮಗೆ ಅಕ್ಕಿ ಸ್ವಲ್ಪ ದೊಡ್ಡದಾಗಿ ಅನ್ನ ಆಗುವ ಹಂತಕ್ಕೆ ಬರುತ್ತಿದೆ, ನೀರೆಲ್ಲ ಖಾಲಿ ಆದಂತೆ ಕಾಣಿಸುತ್ತಿದೆ ಎಂದಾದರೆ ತಕ್ಷಣ ಉರಿಯನ್ನು ಸಣ್ಣ ಮಾಡಿ.

ನಂತರ ಒಂದು ಪಾತ್ರೆಯನ್ನು ಮುಚ್ಚಿ, ಆಗಾಗ ಒಮ್ಮೆ ತಳದಿಂದ ಅಕ್ಕಿಯನ್ನು ಮೇಲಕ್ಕೆ ಹಾಕುತ್ತಾ ಮಿಕ್ಸ್ ಮಾಡಿ, ಇದಕ್ಕೆ ಮರದ ಕೈ ಬಳಕೆ ಮಾಡಿ, ಸ್ಟೀಲ್ ಕೈ ಬಳಕೆ ಮಾಡಿದರೆ ಅಕ್ಕಿ ಎರಡು ಹೋಳಾಗುತ್ತದೆ.
ನಂತರ ಇನ್ನೇನು ಶೇ.80ರಷ್ಟು ತಿಂಡಿ ರೆಡಿ ಇದೆ ಎನಿಸಿದರೆ ಪಾತ್ರೆಯನ್ನು ತೆಗೆದು ತಳಕ್ಕೊಂದು ಹೆಂಚನ್ನು ಇಡಿ. ಕಬ್ಬಿಣದ ಹಂಚಿನ ಮೇಲೆ ನಿಮ್ಮ ಪಾತ್ರೆಯನ್ನು ಇಡಿ. ಮತ್ತೆ ಮುಚ್ಚಿ ಐದು ನಿಮಿಷ ಬೇಯಲು ಬಿಡಿ
ಹಬೆಗೆ ಅಕ್ಕಿ ಬೆಂದುಬಿಡುತ್ತದೆ. ಆನಂತರ ತಳದಿಂದ ಕೈಯಾಡಿಸಿ, ಪಾತ್ರೆಗೆ ಅಂಟಿದ್ದ ಎಲ್ಲ ಅಕ್ಕಿಯೂ ಅನ್ನವಾಗಿ ಮಿಕ್ಸ್ ಆಗಿರುತ್ತದೆ. ಕಡೆಗೆ ಒಲೆ ಆಫ್ ಮಾಡಿ ಮತ್ತೆ ಐದು ನಿಮಿಷ ಮುಚ್ಚಿಯೇ ಇಡಿ.
ಇನ್ನು ನಿಮ್ಮ ತಿಂಡಿ ರೆಡಿ, ಅಕ್ಕಿ ಮುದ್ದೆಯಾಗಿರೋದಿಲ್ಲ. ಹೊಟೇಲ್‌ಗಳಲ್ಲಿ ಕೊಡುವ ರೀತಿಯ ಕನ್ಸಿಸ್ಟೆನ್ಸಿ ಸಿಗುತ್ತದೆ. ಒಂದೆರಡು ಬಾರಿ ಪ್ರಾಕ್ಟೀಸ್ ಮಾಡಿ ಆಗ ಪ್ರತೀ ಅಳತೆ, ಬೇಯುವ ವಿಧಾನ ಎಲ್ಲವೂ ನಿಮಗೆ ತಿಳಿಯುತ್ತದೆ.



