ಶಿವಸೇನೆ ಚುನಾವಣಾ ಚಿಹ್ನೆಗೆ ಬೇಡಿಕೆ ಇಡಲಿದ್ದಾರಾ ಶಿಂಧೆ? ಚುನಾವಣಾ ಆಯೋಗದ ನಿಯಮ ಏನನ್ನುತ್ತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶಿವಸೇನೆಯಲ್ಲಿ ಬಂಡಾಯದ ಬಾವುಟ ಹಾರಿಸಿರುವ ಏಕನಾಥ್‌ ಶಿಂಧೆ ಮತ್ತವರ ಬೆಂಬಲಿಗರ ಗುಂಪು ತಮ್ಮ ಬಂಡಾಯವನ್ನು ಯಶಸ್ವಿಯಾಗಿಸಲು ಹೆಚ್ಚು ಪ್ರಯತ್ನಿಸುತ್ತಿದೆ. ಪ್ರಸ್ತುತ ಶಿವಸೇನೆಯ ಚುನಾವಣಾ ಚಿಹ್ನೆಯನ್ನು ತನ್ನದಾಗಿಸಿಕೊಳ್ಳಲು ಶಿಂಧೆಯವರ ಬಂಡಾಯದ ಗುಂಪು ಮುಂದಾಗಿದೆ ಎಂದು ನ್ಯೂಸ್‌18 ವರದಿ ಮಾಡಿದೆ.

ಬಂಡಾಯದ ಗುಂಪು ತಾವೇ ನಿಜವಾದ ಶಿವಸೇನೆ ಎಂದು ಪ್ರತಿಪಾದಿಸುತ್ತಿದ್ದು ಇದು ಹಾಲಿ ಮುಖ್ಯಸ್ಥ ಉದ್ಧವ್‌ ಠಾಕ್ರೆಯವರನ್ನು ಫಜೀತಿಗೆ ಸಿಲುಕಿಸಿದೆ. ಪ್ರಸ್ತುತ ಗುವಾಹಟಿಯ ರ್ಯಾಡಿಸನ್‌ ಬ್ಲೂ ಹೊಟೇಲಿನಲ್ಲಿರುವ ಬಂಡಾಯದ ಗುಂಪಿನಲ್ಲಿರುವ 34 ಶಾಸಕರು ಅಧಿಕೃತವಾಗಿ ಏಕಾನಥ್‌ ಶಿಂಧೆಯವರನ್ನು ಬೆಂಬಲಿಸಿದ್ದಾರೆ. ಇನ್ನೂ ಮೂವರು ಶಾಸಕರು ಬಂಡಾಯದ ಗುಂಪನ್ನು ಸೇರಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಚುನಾವಣಾ ಚಿಹ್ನೆಯ ವಿಷಯಕ್ಕೆ ಬಂದರೆ 1968ರ ಚುನಾವಣಾ ಚಿಹ್ನೆಗಳ ಮೀಸಲಾತಿ ಮತ್ತು ಹಂಚಿಕೆ ಆದೇಶದ ಅನ್ವಯ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ. ಪಕ್ಷದೊಳಗೆ ವಿಭಜನೆಯಾದಾಗ ಚುನಾವಣಾ ಆಯೋಗವು ಹಕ್ಕುದಾರರ ಬಣದಲ್ಲಿರುವ ಚುನಾಯಿತ ಪ್ರತಿನಿಧಿಗಳ ಬೆಂಬಲವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಈ ಆದೇಶದ 15ನೇ ಪ್ಯಾರಾದ ಅಡಿಯಲ್ಲಿ ಹೆಸರು ಮತ್ತು ಚಿಹ್ನೆಯ ಮೇಲೆ ಹಕ್ಕು ಸಾಧಿಸುವ ಪ್ರತಿಸ್ಪರ್ಧಿ ಗುಂಪುಗಳು ಅಥವಾ ಮಾನ್ಯತೆ ಪಡೆದ ರಾಜಕೀಯ ಪಕ್ಷದ ವಿಭಾಗಗಳ ನಡುವಿನ ವಿವಾದಗಳನ್ನು ನಿರ್ಧರಿಸುವ ಅಧಿಕಾರವನ್ನು ಚುನಾವಣಾ ಆಯೋಗ ಹೊಂದಿದೆ.

ಶಿಂಧೆ ಪಾಳಯವು ಚಿಹ್ನೆ ತನ್ನದೆಂದು ಹೇಳಿಕೊಂಡು ಅದನ್ನು ಸಾಬೀತು ಪಡಿಸಲು ಅಗತ್ಯವಾದ ಸಂಖ್ಯಾಬಲವನ್ನು ಹೊಂದಿದ್ದರೆ ಬಂಡಾಯದ ಗುಂಪನ್ನೇ ಅಧಿಕೃತ ಶಿವಸೇನೆ ಎಂದು ಗುರುತಿಸುವ ಅಥವಾ ಹಾಗೇ ಬಿಡುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!