ವರುಣಾ ಕ್ಷೇತ್ರಕ್ಕೆ ಬಿ.ವೈ.ವಿಜಯೇಂದ್ರ ಬಂದ್ರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇನೆ: ವಿ.ಸೋಮಣ್ಣ

ಹೊಸದಿಗಂತ ವರದಿ,ಮೈಸೂರು:

ವರುಣಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ವಿಜಯೇಂದ್ರ ಸ್ಪರ್ಧಿಸಲು ಬಂದರೆ ನಾನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇನೆ ಎಂದು ಕ್ಷೇತ್ರದ ಅಭ್ಯರ್ಥಿಯಾದ ಸಚಿವ ವಿ.ಸೋಮಣ್ಣ ಹೇಳಿದರು.

ಗುರುವಾರ ನಗರದ ಚಾಮರಾಜಪುರಂನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವರುಣಾ ಕ್ಷೇತ್ರಕ್ಕೆ ಬಿ.ವೈ.ವಿಜಯೇಂದ್ರರಿಗೆ ಟಿಕೆಟ್ ಕೊಡಬಾರದು ಎಂದು ಯಾರು ಹೇಳಿದರು ಎಂದು ಪ್ರಶ್ನಿಸಿದರಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ತಾವು ಸ್ಪರ್ಧಿಸುತ್ತಿದ್ದ ಶಿಕಾರಿಪುತ್ರದಿಂದ ತಮ್ಮ ಪುತ್ರ ಬಿ.ವೈ.ವಿಜಯೇಂದ್ರರನ್ನು ಕಣಕ್ಕೆ ಇಳಿಸುತ್ತಿದ್ದಾರೆ. ದೂರದೃಷ್ಠಿಯಿಟ್ಟುಕೊಂಡು ವರುಣಾ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿಲ್ಲ, ಮುಂದೆ ತಮ್ಮ ಮಗ ಮುಖ್ಯಮಂತ್ರಿಯಾಗಲಿ ಎಂಬ ದೂರದೃಷ್ಠಿಯಿಂದಲೇನೋ ಶಿಕಾರಿಪುರಕ್ಕೆ ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದ್ದಾರೆ. ನಾನು ವರುಣಾ ಹಾಗೂ ಚಾಮರಾಜನಗರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಘೋಷಣೆಯಾದ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ, ಅವರಿಗೆ ಸಿಹಿ ತಿನ್ನಿಸಿ, ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಸವಾಲು ನನ್ನದಲ್ಲ, ಅದು ನಿಮ್ಮದಾಗಿದೆ ಎಂದು ತಿಳಿಸಿ, ಚುನಾವಣಾ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದೇನೆ. ಅದೇ ರೀತಿ ಬಿ.ವೈ.ವಿಜಯೇಂದ್ರರನ್ನೂ ನನ್ನ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಬರುವಂತೆ ಕೋರಿದ್ದೇನೆ. ಪ್ರಚಾರಕ್ಕೆ ಬರುವುದು ಬಿಡುವುದು ಅವರಿಗೆ ಸೇರಿದ್ದು ಎಂದರು.

ಏ.17ರಂದು ವರುಣಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಅಲ್ಲಿಯ ತನಕ ಒಂದು ವೇಳೆ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಅಭ್ಯರ್ಥಿಯಾಗಿ ವರುಣಾ ಕ್ಷೇತ್ರಕ್ಕೆ ಬರುವುದಾದರೆ, ಅವರನ್ನು ನಾನು ಕೆಂಪು ಹಾಸಿಗೆ ಹಾಕಿ ಸ್ವಾಗತಿಸುತ್ತೇನೆ ಎಂದು ನುಡಿದರು.

ಟೆಂಪಲ್ ರನ್ ನಡೆಸಿದ ಸೋಮಣ್ಣ 
ಎರಡು ಕ್ಷೇತ್ರಗಳ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಸಚಿವ ವಿ.ಸೋಮಣ್ಣ ಗುರುವಾರ ಟೆಂಪಲ್ ರನ್ ನಡೆಸಿದರು. ಬೆಂಗಳೂರಿನಿoದ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಅವರು, ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಬಳಿಕ ನಂಜನಗೂಡಿಗೆ ತೆರಳಿ ಶ್ರೀಕಂಠೇಶ್ವರನ ದರ್ಶನ ಪಡೆದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿಯವರ ಆಶೀರ್ವಾದ ಪಡೆದರು.

ವರುಣಾ ಕ್ಷೇತ್ರದ ಮುಖಂಡರ ಮನವೊಲೈಕೆಗೆ ಕಸರತ್ತು; ನಗರದ ಖಾಸಗಿ ಹೋಟೆಲ್‌ನಲ್ಲಿ ವರುಣಾ ಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಪ್ರತ್ಯೇಕ ಸಭೆಗಳನ್ನು ನಡೆಸಿದ ವಿ.ಸೋಮಣ್ಣ ಎಲ್ಲರ ಮನವೊಲೈಕೆಗೆ ಕಸರತ್ತು ನಡೆಸಿದರು. ಟಿಕೆಟ್ ಸಿಗದೆ ನಿರಾಶೆಗೊಂಡಿರುವವರನ್ನು ಸಂಪರ್ಕಿಸಿ, ಸಮಾಧಾನಪಡಿಸುವ ಪ್ರಯತ್ನ ನಡೆಸಿದರಲ್ಲದೆ, ತಮ್ಮ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!