September 7, 2026
Monday, September 7, 2026
spot_img

ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರಿಗೆ ಗೌರವ, ಸುರಕ್ಷತೆ ಸಿಗಬೇಕು: ನಾಗಲಕ್ಷ್ಮಿ ಚೌಧರಿ

ಹೊಸದಿಗಂತ ವರದಿ ಬೆಳಗಾವಿ :

ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಗೌರವ, ಘನತೆ ಹಾಗೂ ಸುರಕ್ಷತೆಯೊಂದಿಗೆ ಕಾರ್ಯನಿರ್ವಹಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರು ತಮ್ಮ ಹಕ್ಕುಗಳ ಅರಿವು ಪಡೆಯಬೇಕು. ಮಹಿಳೆಯರು ಯಾವುದೇ ಭಯ ಅಥವಾ ಮುಜುಗರವಿಲ್ಲದೆ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಹಾಗೂ ಅಗತ್ಯ ನೆರವು ಪಡೆಯುವಂತಹ ವಾತಾವರಣವನ್ನು ನಿರ್ಮಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ತಿಳಿಸಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸುವರ್ಣ ಸೌಧದ ಸೆಂಟ್ರಲ್ ಹಾಲ್ ನಲ್ಲಿ ಸೋಮವಾರ ನಡೆದ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ ಮತ್ತು ನಿವಾರಿಸುವಿಕೆ) ಕಾಯ್ದೆ 2013ರ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಹಿಳೆಯರ ಸುರಕ್ಷತೆ ಹಾಗೂ ಹಕ್ಕುಗಳ ರಕ್ಷಣೆಗೆ ರಾಜ್ಯ ಮಹಿಳಾ ಆಯೋಗದಿಂದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಮಹಿಳೆಯರಿಗೆ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಸಹಾಯವಾಣಿ 181, 112 ಹಾಗೂ ವಾಟ್ಸಾಪ್ ಮೂಲಕ ಸಹಾಯ ಸಂದೇಶ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಹಿಳೆಯರು ತಮಗಾಗುವ ಕಿರುಕುಳ, ಅನ್ಯಾಯ ಅಥವಾ ಇತರೆ ಸಮಸ್ಯೆಗಳ ಕುರಿತು ಆಯೋಗವನ್ನು ಸಂಪರ್ಕಿಸಿ ಸೂಕ್ತ ನೆರವು ಹಾಗೂ ಮಾರ್ಗದರ್ಶನ ಪಡೆಯಬಹುದಾಗಿದೆ ಎಂದು ಹೇಳಿದರು.

ಕಾರ್ಯಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳದಿಂದ ಮುಕ್ತವಾದ ವಾತಾವರಣ ಕಲ್ಪಿಸುವುದು ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಕಾರ್ಯಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ (POSH—Prevention of Sexual Harassment) ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ. ಪ್ರತಿಯೊಂದು ಸಂಸ್ಥೆಯಲ್ಲಿಯೂ POSH ಕಾಯ್ದೆಯ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಹಿಳೆಯರ ಗೌರವ, ಘನತೆ ಹಾಗೂ ಸುರಕ್ಷತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.

ಮಹಿಳೆಯರ ರಕ್ಷಣೆ ಹಾಗೂ ಹಕ್ಕುಗಳಿಗಾಗಿ ಮಹಿಳೆಯರೇ ರೂಪಿಸಿದ ಸಂಸ್ಥೆಯೇ ಮಹಿಳಾ ಆಯೋಗವಾಗಿದೆ. ಬಾಲ್ಯ ವಿವಾಹ ತಡೆ ಹಾಗೂ ಹೆಣ್ಣು ಭ್ರೂಣಹತ್ಯೆ ನಿರ್ಮೂಲನೆ ಸೇರಿದಂತೆ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ಅನ್ಯಾಯಗಳನ್ನು ತಡೆಯುವ ಉದ್ದೇಶದಿಂದ ಮಹಿಳಾ ಆಯೋಗದ ಅಗತ್ಯತೆ ಬಲವಾಗಿ ಮೂಡಿಬಂದಿತು. ರಾಜಸ್ಥಾನದ ಮಹಿಳೆಯೊಬ್ಬರ ಪ್ರಯತ್ನವೂ ಮಹಿಳಾ ಆಯೋಗ ಸ್ಥಾಪನೆಯ ಚಿಂತನೆಗೆ ಪ್ರಮುಖ ಕಾರಣವಾಯಿತು. ಮಹಿಳೆಯರ ಹಕ್ಕುಗಳು ಹಾಗೂ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆಯೋಗವು ನಿರಂತರವಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ನಾಗಲಕ್ಷ್ಮಿ ಚೌಧರಿ ಹೇಳಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರಶಾಂತ ತುರಮುರಿ ಮಾತನಾಡಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳವನ್ನು ತಡೆಗಟ್ಟುವುದು, ಮಹಿಳೆಯರಿಗೆ ಸುರಕ್ಷಿತ ಹಾಗೂ ಗೌರವಯುತ ಕಾರ್ಯನಿರ್ವಹಣೆಯ ವಾತಾವರಣ ಕಲ್ಪಿಸುವುದು ಮತ್ತು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವುದು ಕಾರ್ಯಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ (POSH) ಹಾಗೂ ಆಂತರಿಕ ದೂರು ಸಮಿತಿಯ ಪ್ರಮುಖ ಉದ್ದೇಶಗಳಾಗಿವೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !