ಹಾವೇರಿ ಜಿಲ್ಲೆಯನ್ನು ರಾಜ್ಯದ ಮಾದರಿ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸಲು ಕಾರ್ಯನಿರ್ವಹಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ಹೊಸದಿಗಂತ ವರದಿ, ಹಾವೇರಿ:

ಹಾವೇರಿ ಜಿಲ್ಲೆಯನ್ನು ರಾಜ್ಯದ ಮಾದರಿ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸುವ ನಿಶ್ಚಿತ ಗುರಿಯೊಂದಿಗೆ ಜಿಲ್ಲೆಯ ಅಧಿಕಾರಿಗಳು ಶ್ರದ್ಧೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಅವರು ಸೂಚನೆ ನೀಡಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ಝೂಮ್ ಮೂಲಕ ಸಭೆ ನಡೆಸಿದ ಅವರು, ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಮಾಹಿತಿ ಪಡೆದುಕೊಂಡರು. ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಮಾದರಿ ಜಿಲ್ಲೆಯನ್ನಾಗಿಸುವ ಕಲ್ಪನೆ ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆಯಂತೆ ನಾವೆಲ್ಲ ಕೆಲಸಮಾಡಬೇಕಾಗುತ್ತದೆ. ರಾಜ್ಯದಲ್ಲಿ ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ಇಲಾಖೆಗಳ ಮುಖ್ಯಸ್ಥರಿಂದ ಅತ್ಯುತ್ತಮವಾದ ಕೆಲಸವನ್ನು ನಿರೀಕ್ಷೆ ಮಾಡುತ್ತೇನೆ. ಶ್ರದ್ಧೆ ಮತ್ತು ಬದ್ಧತೆಯಿಂದ ಕಾಲಮಿತಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಕೇವಲ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ ಮಾತ್ರ ಜವಾಬ್ದಾರರಲ್ಲ. ಎಲ್ಲ ಕೆಲಸಗಳನ್ನು ಇವರಿಬ್ಬರು ಮಾಡಲು ಸಾಧ್ಯವಿಲ್ಲ. ಪ್ರತಿ ಇಲಾಖಾ ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೆಲಸಮಾಡಬೇಕಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಪ್ರತಿ ಇಲಾಖಾ ಅಧಿಕಾರಿಗಳು ತಮ್ಮ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಮಾದರಿಯಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಿರ್ಧಿಷ್ಟವಾದ ಗುರಿಗಳನ್ನು ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕಾಲಮಿತಿಯೊಳಗೆ ಅನುಷ್ಠಾನಗೊಳ್ಳಬೇಕು. ಇಲಾಖೆಗೆ ಸಂಬಂಧಿಸಿದಂತೆ ಏನಾದರೂ ಬೇಡಿಕೆ, ಅನುಷ್ಠಾನದಲ್ಲಿ ತೊಡಕುಗಳಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತನ್ನಿ ಅಥವಾ ನೇರವಾಗಿ ನನಗೆ ಕರೆಮಾಡಿ ಮಾಹಿತಿ ನೀಡಿ. ಯಾವುದೇ ಹಿಂಜರಿಕೆ ಬೇಡ, ಮುಕ್ತ ಮನಸ್ಸಿನಿಂದ ಚರ್ಚಿಸಿ. ನಿಮ್ಮ ಸಮಸ್ಯೆ, ಬೇಡಿಕೆಗಳಿಗೆ ಎಲ್ಲ ರೀತಿಯ ನೆರವು ನೀಡುತ್ತೇನೆ. ನಿಮ್ಮ ಇಲಾಖಾ ಕೆಲಸಗಳಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ನಿಮಗೆ ನೀಡುವ ಗುರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಗುಣಮಟ್ಟದ ಶಿಕ್ಷಣ, ಉದ್ಯೋಗ ಸೃಜನೆ, ಸಬಲೀಕರಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಜೊತೆಗೆ ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಮಾದರಿಯಾಗಬೇಕು ಎಂದು ಹೇಳಿದರು.
ಕುಡಿಯುವ ನೀರಿನ ಸರಬರಾಜು, ವಿದ್ಯುತ್ ಸರಬರಾಜು ಹಾಗೂ ರಸ್ತೆ ಸಮಸ್ಯೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಒಳಗೊಂಡಂತೆ ಪ್ರತಿ ಇಲಾಖೆಗಳು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಲು ಇಲಾಖಾವಾರು ಹೆಲ್ಪಲೈನ್‌ಗಳನ್ನು ಆರಂಭಿಸಬೇಕು. ಆಯಾ ಇಲಾಖೆಯ ರಾಜ್ಯ ಮಟ್ಟದ ಹೆಲ್ಪಲೈನ್‌ಗಳಿಗೆ ಲಿಂಕ್ ಕೊಡಬೇಕು. ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಕುಡಿಯುವ ನೀರು, ವಸತಿ ಪರಿಹಾರ, ಕೋವಿಡ್ ವ್ಯಾಕ್ಸಿನ್ ಪ್ರಗತಿ ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಝೂಮ್ ಮೀಟಿಂಗ್‌ನಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!