ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈಗಿನ ಒತ್ತಡದ ಬದುಕಿನಲ್ಲಿ, ಧಾವಂತದ ಜಗತ್ತಿನಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೆ ಕಷ್ಟಕರ. ಹೀಗಾಗಿ ಜನರಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ಏನಿದು ವಿಶ್ವ ಮಾನಸಿಕ ಆರೋಗ್ಯ ದಿನ? ಯಾವಾಗ ಆರಂಭಿಸಲಾಯಿತು? ಇತಿಹಾಸವೇನು? ಈ ವರ್ಷದ ಘೋಷವಾಕ್ಯ ಏನು ಎಂದು ಇಲ್ಲಿ ತಿಳಿಯಿರಿ.
ವಿಶ್ವ ಮಾನಸಿಕ ಆರೋಗ್ಯ ದಿನದ ಆರಂಭ, ಇತಿಹಾಸ:
1992ರಲ್ಲಿ ಮೊದಲ ಬಾರಿಗೆ ಮಾನಸಿಕ ಆರೋಗ್ಯದ ವಿಶ್ವ ಒಕ್ಕೂಟ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆರಂಭಿಸಿತು. ಲಂಡನ್‌ನಲ್ಲಿ 1948ರಲ್ಲಿ World Federation for Mental Health ಸ್ಥಾಪನೆಯಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಜಗತ್ತಿನ ವಿವಿಧೆಡೆ ಜನರಲ್ಲಿ ಮಾನಸಿಕ ಆರೋಗ್ಯದ ಕುರಿತು ಕಾಳಜಿ, ಎಚ್ಚರಿಕೆ ವಹಿಸುವಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜಗತ್ತಿನ ಬಹುತೇಕ ದೇಶಗಳು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತವೆ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಅಗತ್ಯ ಎಂಬ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಮಹತ್ವ:
ಮಾನಸಿಕ ತೊಂದರೆಯ ಕುರಿತು ಇರುವ ಕಳಂಕ ಹೋಗಲಾಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ದೇಹದ ಇತರೆ ಕಾಯಿಲೆಗಳಂತೆ ಇದೂ ಒಂದು ಮನಸ್ಸಿನ ತೊಂದರೆ. ಹಾಗಾಗಿ ಕೆಟ್ಟದಾಗಿ ನೋಡುವುದು ತಪ್ಪು. ಮಾನಸಿಕ ತೊಂದರೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸುವುದೂ ಈ ದಿನದ ಉದ್ದೇಶ.
ವಿಶ್ವ ಮಾನಸಿಕ ಆರೋಗ್ಯ ದಿನ- 2023ರ ಥೀಮ್:
2023ರ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್ ‘ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು’ ಎಂಬುದು. ಮಾನಸಿಕ ಆರೋಗ್ಯದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಥೀಮ್ ಅನ್ನು ಇಡಲಾಗಿದೆ.