ಸರ್ಕಾರ ಪ್ರತಿಮೆ ನಿರ್ಮಾಣಕ್ಕಿಂತ ಬಡವರ ಬಗ್ಗೆ ಚಿಂತಿಸುವುದು ಮುಖ್ಯ: ಮಧು ಬಂಗಾರಪ್ಪ

ಹೊಸದಿಗಂತ ವರದಿ, ಮಂಡ್ಯ:
ಪ್ರತಿಮೆ ನಿರ್ಮಾಣವೇ ಅಭಿವೃದ್ಧಿಯಲ್ಲ. ಪ್ರತಿಮೆ ನಿರ್ಮಾಣ ಮಾಡುವುದಕ್ಕಿಂತ ಬಡವರ ಬಗೆಗಿನ ಚಿಂತನೆ, ಹಿಂದುಳಿದವರ ಬದುಕಿಗೆ ಸಹಕಾರವಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಮುಖ್ಯ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರ ಎಂದೇಳಿಕೊಳ್ಳುವ ಬಿಜೆಪಿ ಬಡವರ ಆರ್ಥಿಕ ಸ್ಥಿತಿಯನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ಎಂಬ ವಿಚಾರವನ್ನು ಅರ್ಥೈಸಿಕೊಳ್ಳಬೇಕು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಮುಂದಾಗಿರುವ ಈ ಸರ್ಕಾರ ರೈತರ ಪರವಾಗಿದೆಯೇ ಎಂದು ಪ್ರಶ್ನಿಸಿದರು.
ಅರಣ್ಯದಲ್ಲಿ ವಾಸವಾಗಿರುವ ಜನರನ್ನು ಒಕ್ಕಲೆಬ್ಬಿಸಿ ಆ ಭೂಮಿಯನ್ನು ಭೂಗಳ್ಳರಿಗೆ ನೀಡುವುದಕ್ಕೆ ಮುಂದಾಗಿದೆ. ಧರ್ಮ, ಜಾತಿ ಹೆಸರಿನಲ್ಲಿ ದ್ವೇಷವನ್ನು ಹ0ುಟ್ಟುಹಾಕುವ ಸಂಸ್ಕೃತಿ ಬಿಜೆಪಿಯದ್ದಾಗಿದೆ. ನಿಜವಾಗಿಯೂ ಹಿಂದುಳಿದ ವರ್ಗದ ಜನರ ಕಷ್ಟಗಳನ್ನು ಅರ್ಥೈಸಿಕೊಂಡು ಅವರ ಬದುಕಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದು ಕಾಂಗ್ರೆಸ್ ಎಂದು ದೃಢವಾಗಿ ಹೇಳಿದರು.
ಬಿಜೆಪಿಯವರು ಏನು ಕೊಟ್ಟರು?
ದೇವರಾಜ ಅರಸು ಹಿಂದುಳಿದ ವರ್ಗದವರು, ಬಡವರಿಗಾಗಿ ಭೂಮಿ ಕೊಟ್ಟರು, ಸಿದ್ದರಾಮಯ್ಯ ಅನ್ನ ಕೊಟ್ಟರು, ಬಂಗಾರಪ್ಪನವರು ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಟ್ಟರು. ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಬಿಜೆಪಿ ಸರ್ಕಾರದವರು ಏನು ಕೊಟ್ಟರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷನಾದ ಬಳಿಕ ರಾಜ್ಯವ್ಯಾಪಿ ಸಂಚರಿಸುತ್ತಾ ಹಿಂದುಳಿದ ವರ್ಗದಲ್ಲಿರುವ ಎಲ್ಲ ಸಮುದಾಯಗಳ ಕಷ್ಟ ಕಾರ್ಪಣ್ಯಗಳನ್ನು ತಿಳಿಯುವ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿದ್ದು ಅವುಗಳನ್ನು ಕ್ರೋಢೀಕರಿಸಿಕೊಂಡು ಯಾವ ಸಣ್ಣ ಸಮುದಾಯಕ್ಕೂ ಅನ್ಯಾಯವಾಗದ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಪ್ರಣಾಳಿಕೆಗೆ ಸೇರಿಸುವುದಾಗಿ ಹೇಳಿದರು.
ಡಿ. 15ರಿಂದ ಜಿಲ್ಲಾ ಮಟ್ಟದಲ್ಲಿ ಹಿಂದುಳಿದವರ ಸಮಾವೇಶ :
ಡಿ.15ರ ಬಳಿಕ ಜಿಲ್ಲಾಮಟ್ಟದ ಹಿಂದುಳಿದ ವರ್ಗಗಳ ಸಮಾವೇಶ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಥವಾ ಇತರೆ ನಾಯಕರ ನಾಯಕತ್ವದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಸಮಾವೇಶ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಹಿಂದುಳಿದ ಗೆಲ್ಲುವರಿಗೆ ಟಿಕೆಟ್:
ಹಿಂದುಳಿದ ವರ್ಗಗಳಲ್ಲೂ ಸಮರ್ಥರಿದ್ದಾರೆ. ಅವರಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ರಾಜ್ಯ ನಾಯಕರಿಗೆ ತಿಳಿಸಿದ್ದೇನೆ. ಹಿಂದುಳಿದ ವರ್ಗದ ಇಷ್ಟೇ ಪ್ರಮಾಣದ ಜನರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಲಾಗುವುದಿಲ್ಲ. ಆದರೆ, ಟಿಕೆಟ್ ಹಂಚಿಕೆ ಮಾಡುವಾಗ ಹಿಂದುಳಿದ ವರ್ಗದಲ್ಲಿರುವ ಗೆಲ್ಲುವ ಅಭ್ಯರ್ಥಿಗಳನ್ನು ಪರಿಗಣಿಸುವಂತೆ ತಿಳಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮುಖಂಡರಾದ ಅಂಜನಾ, ಡಾ.ಹೆಚ್.ಕೃಷ್ಣ, ಹಾಲಹಳ್ಳಿ ರಾಮಲಿಂಗಯ್ಯ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!