ಹೊಸದಿಗಂತ ಡಿಜಿಟಲ್ ಡೆಸ್ಕ್
2020 ರಲ್ಲಿ ತೆರೆಕಂಡಿದ್ದ ದಿಯಾ ಚಿತ್ರ ಜನಮೆಚ್ಚುಗೆ ಗಳಿಸಿತ್ತು. ಕೃಷ್ಣ ಚೈತನ್ಯ ನಿರ್ಮಾಣ ಮಾಡಿ ಕೆ.ಎಸ್.ಅಶೋಕ್ ನಿರ್ದೇಶಿಸಿದ್ದ ಚಿತ್ರ ರೊಮ್ಯಾಂಟಿಕ್ ಚಿತ್ರಕತೆ, ಭಾವನಾತ್ಮಕ ದೃಶ್ಯಾವಳಿಗಳಿಗಳಿಂದ ಯುವಜನರ ಮನಗೆದ್ದಿತ್ತು.
ದಿಯಾ ಚಿತ್ರ ಇದೀಗ ಹಿಂದಿ ಹಾಗೂ ಮರಾಠಿ ಭಾಷೆಗೆ ರಿಮೇಕ್ ಆಗುತ್ತಿದೆ. ಹಿಂದಿಯಲ್ಲಿ ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಚಿತ್ರದ ಮರಾಠಿ ರಿಮೇಕ್ ಗೆ ತಯಾರಿ ನಡೆಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ದಿಯಾಗೆ ಆಕ್ಷನ್ ಕಟ್ ಹೇಳಿದ್ದ ಕೆ.ಎಸ್. ಅಶೋಕ್ ಹಿಂದಿ, ಮರಾಠಿಯಲ್ಲಿಯೂ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಹಿಂದಿ ರಿಮೇಕ್‌ನಲ್ಲಿ ಆದಿ ಪಾತ್ರವನ್ನು ಪುನರಾವರ್ತಿಸಿದ್ದ ಪೃಥ್ವಿ ಅಂಬರ್ ಮರಾಠಿ ಆವೃತ್ತಿಯಲ್ಲೂ ನಟಿಸಲಿದ್ದಾರೆ.
ದಿಯಾ ಚಿತ್ರದ ಮರಾಠಿ ರಿಮೇಕ್ ಮುಹೂರ್ತ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದೆ. ಇದೀಗ ಚಿತ್ರತಂಡ ಮೈಸೂರು, ಮಂಗಳೂರು ಸೇರಿದಂತೆ ಮತ್ತಿತರೆ ಸ್ಥಳಗಳಲ್ಲಿ ಚಿತ್ರೀಕರಣದಲ್ಲಿ ನಿರತವಾಗಿದೆ. ಪೃಥ್ವಿ ಅಂಬರ್ ಜೊತೆಗೆ ಮರಾಠಿ ರಿಮೇಕ್‌ನಲ್ಲಿ ರಿತಿಕಾ ಶ್ರೋತ್ರಿ ನಾಯಕಿಯಾಗಿ ನಟಿಸಿದ್ದಾರೆ.
ಮರಾಠಿ ಜನಪ್ರಿಯ ಧಾರಾವಾಹಿ ನಟ ಅಜಿಂಕ್ಯಾ ರಾವುತ್ ಕನ್ನಡದಲ್ಲಿ ದೀಕ್ಷಿತ್ ಶೆಟ್ಟಿ ಮಾಡಿದ್ದ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಪವಿತ್ರಾ ಲೋಕೇಶ್ ನಿರ್ವಹಿಸಿದ್ದ ತಾಯಿಯ ಪಾತ್ರಕ್ಕೆ ಮೃಣಾಲ್ ಕುಲಕರ್ಣಿ ನಟಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ