ಖ್ಯಾತ ನಿರ್ದೇಶಕ ಯಶ್ ಚೋಪ್ರಾ ಪತ್ನಿ ಪಮೇಲಾ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಬಾಲಿವುಡ್‌ ನ ಖ್ಯಾತ ನಿರ್ಮಾಪಕ ಯಶ್‌ ಚೋಪ್ರಾ (74) ಅವರ ಪತ್ನಿ ಪಮೇಲಾ ಚೋಪ್ರಾ ‌ಇಂದು ಮುಂಜಾನೆ ನಿಧನರಾಗಿದ್ದಾರೆ.

ಹಿನ್ನೆಲೆ ಗಾಯಕಿಯಾಗಿಯೂ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದ ಚೋಪ್ರಾ ಅವರು ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮುಂಬಯಿಯ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟೆರ್‌ ನಲ್ಲಿದ್ದ ಅವರು ಗುರುವಾರ ಮುಂಜಾನೆ ಸಾವನ್ನಪ್ಪಿದ್ದಾರೆ. ಅವರ ನಿಧನದ ಸುದ್ದಿಯನ್ನು ಯಶ್‌ ರಾಜ್‌ ಫಿಲ್ಮ್ಸ್‌ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಇತ್ತೀಚೆಗೆ ಪಮೇಲಾ ಚೋಪ್ರಾ ಅವರು ಯಶ್‌ ರಾಜ್‌ ಫಿಲ್ಮ್ಸ್‌ ನ ಡಾಕ್ಯುಮೆಂಟರಿ ʼದಿ ರೊಮ್ಯಾಂಟಿಕ್ಸ್ʼ ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ತನ್ನ ಪತಿ ಯಶ್‌ ರಾಜ್‌ ಅವರ ಸಿನಿಮಾ ಜರ್ನಿಯ ಕುರಿತು ಮಾತನಾಡಿದ್ದರು.

1970ರಲ್ಲಿ ಪಮೇಲಾ ಯಶ್‌ ಚೋಪ್ರಾರನ್ನು ವಿವಾಹವಾದರು. ಅವರಿಗೆ ಆದಿತ್ಯ ಮತ್ತು ಉದಯ್ ಚೋಪ್ರಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರಾದ ಆದಿತ್ಯರವರು ರಾಣಿ ಮುಖರ್ಜಿ ಅವರನ್ನು ವಿವಾಹವಾಗಿದ್ದಾರೆ. ಉದಯ್ ಒಬ್ಬ ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ.

ಹಿನ್ನೆಲೆ ಗಾಯಕಿಯೂ ಆಗಿದ್ದ ಪಮೇಲಾ ಹಲವಾರು ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ. ತನ್ನ ಗಂಡನ ಸಿನಿಮಾವಾದ ʼಕಭಿ ಕಭಿʼ (1976), ʼಮುಜ್ಸೆ ದೋಸ್ತಿ ಕರೋಗೆʼ (2002) ಸಿನಿಮಾದ ಗೀತೆಗಳನ್ನು ಹಾಡಿದ್ದಾರೆ. ಇದಲ್ಲದೆ ಅವರು 1993 ರಲ್ಲಿ ಬಂದ ʼಐನಾʼ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

ಪಮೇಲಾ ಅವರು ತಮ್ಮ ಪತಿ ಯಶ್ ಚೋಪ್ರಾ, ಅವರ ಪುತ್ರ ಆದಿತ್ಯ ಚೋಪ್ರಾ ಮತ್ತು ವೃತ್ತಿಪರ ಲೇಖಕಿ ತನುಜಾ ಚಂದ್ರ ಅವರೊಂದಿಗೆ ಸೇರಿ 1997ರಲ್ಲಿ ತನ್ನ ಪತಿಯ ಚಲನಚಿತ್ರ ʼದಿಲ್ ತೋ ಪಾಗಲ್ ಹೈʼ ಚಿತ್ರದ ಸ್ಕ್ರಿಪ್ಟ್ ಕೂಡ ಬರೆದಿದ್ದರು. ʼದಿಲ್ ತೋ ಪಾಗಲ್ ಹೈʼ ಚಿತ್ರದ ʼಏಕ್ ದುಜೆ ಕೆ ವಾಸ್ತೆʼ ಹಾಡಿನಲ್ಲಿ ತನ್ನ ಪತಿಯೊಂದಿಗೆ ಕಾಣಿಸಿಕೊಂಡಿದ್ದರು.

ಪಮೇಲಾ ಅವರ ಪತಿ ಯಶ್‌ ಚೋಪ್ರಾ ಅವರು 2012 ರಲ್ಲಿ ನಿಧನರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!