ಹೊಸದಿಗಂತ ವರದಿ ಬೀದರ್:
ಪ್ರತಿದಿನ ಯೋಗಾಭ್ಯಾಸ ಮಾಡುವ ವ್ಯಕ್ತಿ ನೂರು ವರ್ಷಗಳ ಪೂರ್ಣ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗವನ್ನು ತಮ್ಮ ನಿತ್ಯ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ತಿಳಿಸಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂ.21 ರಂದು ಔರಾದ(ಬಿ) ತಾಲ್ಲೂಕು ಕ್ರೀಡಾಂಗಣದ ಆವರಣದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿದಿನ ಯೋಗಾಭ್ಯಾಸ ಮಾಡುವವರಿಗೆ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಎದುರಾಗುವುದಿಲ್ಲ. ದಿನನಿತ್ಯ ಆಟೋಟಗಳಲ್ಲಿ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವವರನ್ನು ರೋಗಗಳು ಸುಲಭವಾಗಿ ಬಾಧಿಸುವುದಿಲ್ಲ. ದೈಹಿಕ ಚಟುವಟಿಕೆಗಳ ಕೊರತೆಯಿಂದ ಟೊಂಕದಲ್ಲಿ ಉಳುಕು, ತಲೆನೋವು, ಎದೆನೋವು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿಯಮಿತವಾಗಿ ವಾಕಿಂಗ್, ಜಾಗಿಂಗ್, ಯೋಗ ಹಾಗೂ ಪ್ರಾಣಾಯಾಮ ಮಾಡುವವರು ಆರೋಗ್ಯವಂತ ಜೀವನ ನಡೆಸುವುದರ ಜೊತೆಗೆ ದೀರ್ಘಾಯುಷ್ಯ ಹೊಂದಲು ಸಾಧ್ಯವಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ 50 ವರ್ಷ ವಯಸ್ಸಿಗೆ ತಲುಪುವ ವೇಳೆಗೆ ಹಲವು ರೀತಿಯ ದೈಹಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಇಂದು ವಿಶ್ವದ 170ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಚಲಿತದಲ್ಲಿರುವ ಯೋಗ ಭಾರತದ ಮೂಲದ್ದು ಎಂದು ಹೇಳಿಕೊಳ್ಳಲು ಹೆಮ್ಮೆ ಪಡಬೇಕು. ಭಾರತದ ಋಷಿ-ಮುನಿಗಳು ನೀಡಿರುವ ಅಪಾರ ಜ್ಞಾನ, ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ಅಪರೂಪದ ದೇಶ ನಮ್ಮ ಭಾರತವಾಗಿದೆ. ಯೋಗವು ಹಿಂದೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿತ್ತು. ಆರೋಗ್ಯಯುತ ಬದುಕಿಗೆ ಸಹಕಾರಿಯಾಗಿರುವ ಯೋಗ ಪ್ರತಿಯೊಬ್ಬರ ನಿತ್ಯಜೀವನದ ಭಾಗವಾಗಬೇಕಿದೆ ಎಂದು ಹೇಳಿದರು.
ಯೋಗವನ್ನು ಮನೆ-ಮನೆಗೆ ತಲುಪಿಸುವಲ್ಲಿ ಯೋಗಗುರು ಬಾಬಾ ರಾಮದೇವ ಸೇರಿದಂತೆ ಅನೇಕ ಯೋಗ ಪಂಡಿತರು ಹಾಗೂ ಸಾಧಕರು ಮಹತ್ತರ ಕೊಡುಗೆ ನೀಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಯೋಗಕ್ಕೆ ಜಾಗತಿಕ ಮಾನ್ಯತೆ ದೊರೆತಿದ್ದು, ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದೆ. ಇದರ ಪರಿಣಾಮವಾಗಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯೋಗ ಅಪಾರ ಜನಪ್ರಿಯತೆ ಮತ್ತು ಪ್ರಖ್ಯಾತಿ ಗಳಿಸಿದೆ. ಪ್ರಧಾನಿಯವರು ಸಾರ್ವಜನಿಕರ ಆರೋಗ್ಯದ ಹಿತೃಷ್ಟಿಯಿಂದ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:
ಔರಾದ(ಬಿ) ಹಾಗೂ ಕಮಲಗನರ ತಾಲ್ಲೂಕುಗಳಲ್ಲಿ ಸುಮಾರು 450 ಶಾಲೆಗಳವೆ. ಎಲ್ಲ ಶಾಲೆಗಳಲ್ಲಿ ಪ್ರತಿದಿನ ಪ್ರಾರ್ಥನೆಯ ಸಮಯದಲ್ಲಿ ಕನಿಷ್ಠ 10 ರಿಂದ 15 ನಿಮಿಷ ಯೋಗಾಭ್ಯಾಸ ಮಾಡಿಸಬೇಕು. ಈ ಕುರಿತು ಇಲಾಖೆಯ ಅಧಿಕಾರಿಗಳಿಗೆ ತಿಳಿಸುವ ಕೆಲಸ ಮಾಡುತ್ತೇನೆ. ವಿದ್ಯಾರ್ಥಿಗಳು, ಯುವಜನತೆ ಸೇರಿದಂತೆ ಎಲ್ಲ ವಯೋಮಾನದವರು ಯೋಗದತ್ತ ಒಲವು ತೋರಿಸಬೇಕು ಎಂದರು. ತಾಲ್ಲೂಕು ಆರೋಗ್ಯಾಧಿಕಾರಿ ಅನೀಲಕುಮಾರ ಎಕಲೂರ್, ಪ್ರೊ.ಹಾವಗಿರಾವ ವಟಗೆ, ಶಿವರಾಜ ಶೆಟಗಾರ, ಬಸವರಾಜ ಹಳ್ಳೆ ಅವರು ಯೋಗ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ್ ಕಾರ್ಯನಿವಾಹಕ ಅಧಿಕಾರಿ ಕಿರಣ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ರವಿ ಸುಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ವಾಗಂಬರ ಗಾಯಕವಾಡ, ಮುಖಂಡರಾದ ಮಾರುತಿ ಚವ್ಹಾಣ, ಶಿವಾಜಿರಾವ ಪಾಟೀಲ ಮುಂಗನಾಳ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವಾನಂದ ವಡ್ಡೆ, ಪ್ರಕಾಶ ಅಲ್ಮಾಜೆ, ದಯಾನಂದ ಘೂಳೆ, ಕೇರಬಾ ಪವಾರ, ಗುಂಡಪ್ಪ ಮುಧಾಳೆ, ಸಂಗಮೇಶ ದೇಶಮುಖ, ಸುನೀಲ ಸುಸಲಾದೆ, ಅಶೋಕ ಅಲ್ಮಾಜೆ, ಅಶೋಕ ಶೆಂಬೆಳ್ಳಿ, ಸಂದೀಪ ಪಾಟೀಲ, ಆನಂದ ದ್ಯಾಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಸಾಮೂಹಿಕ ಯೋಗಾಭ್ಯಾಸ ನಡೆಸಿದರು.



