ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆಗೆ ಮುಂದಾದ ಯೋಗಿ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿನ ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆಯನ್ನು ನಡೆಸಲು ಉತ್ತರ ಪ್ರದೇಶ ಸರ್ಕಾರವು ಮುಂದಾಗಿದ್ದು, ಶಿಕ್ಷಕರ ಸಂಖ್ಯೆ, ಪಠ್ಯಕ್ರಮ ಮತ್ತು ಅಲ್ಲಿ ಲಭ್ಯವಿರುವ ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ.

ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳ ಲಭ್ಯತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಅಗತ್ಯಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಲಿದೆ.

ಈ ಕುರಿತು ಮಾಹಿತಿ ನೀಡಿದ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ, ಸಮೀಕ್ಷೆಯ ಸಮಯದಲ್ಲಿ, ಮದರಸಾದ ಹೆಸರು ಮತ್ತು ಅದನ್ನು ನಿರ್ವಹಿಸುವ ಸಂಸ್ಥೆ, ಅದು ಖಾಸಗಿ ಅಥವಾ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆಯೇ, ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕುಡಿವ ನೀರು, ಶೌಚಾಲಯ, ಪೀಠೋಪಕರಣಗಳು ಮತ್ತು ವಿದ್ಯುತ್ ಸರಬರಾಜು ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.

ಮದರಸಾದಲ್ಲಿರುವ ಶಿಕ್ಷಕರ ಸಂಖ್ಯೆ, ಅದರ ಪಠ್ಯಕ್ರಮ, ಆದಾಯದ ಮೂಲ ಮತ್ತು ಯಾವುದೇ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ನೊಂದಿಗೆ ಅದರ ಸಂಬಂಧದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು . ಈ ಸಮೀಕ್ಷೆಯ ನಂತರ ರಾಜ್ಯ ಸರ್ಕಾರ ಹೊಸ ಮದರಸಾಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆಯೇ ಎಂಬ ಪ್ರಶ್ನೆಗೆ, ಪ್ರಸ್ತುತ ಮಾನ್ಯತೆ ಇಲ್ಲದ ಮದರಸಾಗಳ ಬಗ್ಗೆ ಮಾತ್ರ ಮಾಹಿತಿ ಸಂಗ್ರಹಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಉತ್ತರ ಪ್ರದೇಶದಲ್ಲಿ ಒಟ್ಟು 16,461 ಮದರಸಾಗಳಿದ್ದು, ಈ ಪೈಕಿ 560ಕ್ಕೆ ಸರ್ಕಾರದ ಅನುದಾನ ನೀಡಿರುವುದು ಗಮನಾರ್ಹ. ರಾಜ್ಯದಲ್ಲಿ ಕಳೆದ ಆರು ವರ್ಷಗಳಿಂದ ಹೊಸ ಮದರಸಾಗಳು ಅನುದಾನದ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಮದರಸಾಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೂ ನಿಯಮಾನುಸಾರ ಹೆರಿಗೆ ರಜೆ ಮತ್ತು ಮಕ್ಕಳ ಆರೈಕೆ ರಜೆ ಸಿಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!