September 25, 2026
Friday, September 25, 2026
spot_img

ʼಯುವಶಕ್ತಿಯೇ ನಮ್ಮ ವಿಕಸಿತ ಭಾರತದ ಬೆನ್ನೆಲುಬುʼ; ಸೇವಾ ಸಂಕಲ್ಪ ಯಾತ್ರಿಗಳೊಂದಿಗೆ ಪಿಎಂ ಮೋದಿ ಸಂವಾದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್‌ನ ವಡ್‌ನಗರದಿಂದ ಉತ್ತರ ಪ್ರದೇಶದ ವಾರಾಣಸಿಯವರೆಗೆ ಪ್ರವಾಸ ಕೈಗೊಂಡಿರುವ ‘ಸೇವಾ ಸಂಕಲ್ಪ ಯಾತ್ರಿಗಳ’ ನಿಸ್ವಾರ್ಥ ಸೇವೆಯ ಉತ್ಸಾಹವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಶುಕ್ರವಾರ ವರ್ಚುವಲ್ ವೇದಿಕೆಯ ಮೂಲಕ ಯಾತ್ರಿಗಳ ಜೊತೆ ಸಂವಾದ ನಡೆಸಿದ ಅವರು, ಈ ಯಾತ್ರೆಯು ತಮ್ಮ ಬದುಕಿನ ಎರಡು ಪ್ರಮುಖ ಘಟ್ಟಗಳನ್ನು ಬೆಸೆದಿದೆ ಎಂದು ತಿಳಿಸಿದ್ದಾರೆ.

ಒಂದು ಜನ್ಮಭೂಮಿ ಇನ್ನೊಂದು ಕರ್ಮಭೂಮಿ

ತಮ್ಮ ಮತ್ತು ಈ ಎರಡು ನಗರಗಳ ನಡುವಿನ ಭಾವನಾತ್ಮಕ ಕನೆಕ್ಷನ್ ಅನ್ನು ಬಿಚ್ಚಿಟ್ಟ ಪ್ರಧಾನಿ, ʼಈ ಎರಡೂ ನಗರಗಳು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಜೀವಂತ ಜಾಗಗಳು. ವಡ್‌ನಗರ ನನ್ನ ಜನ್ಮಭೂಮಿಯಾದರೆ, ಕಾಶಿ ನನ್ನ ಎರಡನೇ ಕರ್ಮಭೂಮಿಯಾಗಿದೆ. ಕಾಶಿಯಲ್ಲಿ ವಿಶ್ವನಾಥನ ಆಶೀರ್ವಾದ ನಮಗಿದ್ದರೆ, ವಡ್‌ನಗರದಲ್ಲಿ ಹಟಕೇಶ್ವರ ಮಹಾದೇವನ ಪ್ರೀತಿ ಹಾಗೂ ಆಶೀರ್ವಾದ ನಮ್ಮ ಮೇಲಿದೆ. ಇವೆರಡರ ನಡುವೆ ಇಷ್ಟೊಂದು ದೊಡ್ಡ ಸೇವಾ ಅಭಿಯಾನ ನಡೆಸುತ್ತಿರುವ ನಿಮ್ಮ ಅನುಭವಗಳನ್ನು ಕೇಳುತ್ತಿದ್ದರೆ, ನಾನು ಕೂಡ ನಿಮ್ಮ ಜೊತೆಯಲ್ಲೇ ಪ್ರಯಾಣ ಮಾಡುತ್ತಿರುವಂತೆ ಭಾಸವಾಗುತ್ತಿದೆ ಎಂದಿದ್ದಾರೆ.

ಸಂಘಟನೆಯ ಹಳೆಯ ದಿನಗಳನ್ನು ನೆನಪಿಸಿಕೊಂಡ ಮೋದಿ

ಯಾತ್ರೆಯ ಸಂದರ್ಭದಲ್ಲಿ ಬದಲಾಗುವ ಹವಾಮಾನ, ಜಾಗಗಳು ಹಾಗೂ ಎದುರಾಗುವ ಸವಾಲುಗಳ ನಡುವೆಯೂ ಯಾತ್ರಿಗಳು ತೋರುತ್ತಿರುವ ಉತ್ಸಾಹವನ್ನು ಪ್ರಧಾನಿ ಗೌರವಿಸಿದರು. ‘ನಾನು ಬಿಜೆಪಿಯ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಇಂತಹ ನೂರಾರು ಯಾತ್ರೆಗಳನ್ನು ಸ್ವತಃ ಆಯೋಜಿಸಿದ ಅನುಭವ ನನಗಿದೆ. ಅದರಲ್ಲಿ ಎಷ್ಟು ಕಷ್ಟಗಳು ಎದುರಾಗುತ್ತವೆ ಎಂಬುದು ನನಗೆ ಗೊತ್ತು. ಆದರೂ ನೀವು ದೃತಿಗೆಡದೆ ಮುನ್ನಡೆದಿದ್ದೀರಿ. ಇಂತಹ ನಿಸ್ವಾರ್ಥ ಸೇವಾ ಮನೋಭಾವದಿಂದಲೇ ನಮ್ಮ ಸರ್ಕಾರ ಆಯುಷ್ಮಾನ್ ಭಾರತ್‌ನಂತಹ ಬಡವರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಯಿತು’ ಎಂದು ಹೆಮ್ಮೆಯಿಂದ ನುಡಿದರು.

ಇದನ್ನೂ ಓದಿ:

ವಿಕಸಿತ ಭಾರತಕ್ಕೆ ಯುವಶಕ್ತಿಯೇ ಶಕ್ತಿ

ದೇಶದ ರಾಜಕಾರಣದ ಕುರಿತು ಮಾತುಗಳನ್ನಾಡಿದ ಪ್ರಧಾನಿ ಮೋದಿ, ‘ರಾಜಕೀಯಕ್ಕೆ ಅದರದ್ದೇ ಆದ ಜಾಗವಿದೆ, ಚುನಾವಣೆಗಳು ಹಾಗೂ ಆಡಳಿತ ನಡೆಸುವುದಕ್ಕೂ ಅದರದ್ದೇ ಆದ ಸಮಯವಿದೆ. ಆದರೆ ನಾವೆಲ್ಲರೂ ಕೊನೆಗೆ ಕೆಲಸ ಮಾಡುತ್ತಿರುವುದು ದೇಶವನ್ನು ಕಟ್ಟಲು ಮಾತ್ರ. 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಈ ಕನಸನ್ನು ನನಸು ಮಾಡಲು ದೇಶದ ಯುವ ಸಮುದಾಯವೇ ನಮಗೆ ಮುಖ್ಯ. ಇಂದು ಭಾರತದ ಯುವ ಪೀಳಿಗೆಯೇ ವಿಕಸಿತ ಭಾರತದ ನಿಜವಾದ ಬೆನ್ನೆಲುಬು ಮತ್ತು ಭವಿಷ್ಯದ ಫಲಾನುಭವಿಗಳು ಎಂದು ಯುವಶಕ್ತಿಗೆ ಕರೆ ನೀಡಿದ್ದಾರೆ.

Must Read