ಹೊಸದಿಗಂತ ವರದಿ ಸುಂಟಿಕೊಪ್ಪ:
ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ ಯುವಕನೊಬ್ಬ ಜಲ ಸಮಾಧಿಯಾದ ಘಟನೆ ಬುಧವಾರ ಸಂಜೆ ನಡೆದಿದೆ.
ಇಲ್ಲಿಗೆ ಸಮೀಪದ ಏಳನೇ ಹೊಸಕೋಟೆಯ ಅಂದಗೋವೆ ಪೈಸಾರಿ ನಿವಾಸಿ ರಜಾಕ್ ಎಂಬವರ ಪುತ್ರ ರಮೀಝ್ (20) ಮೃತ ದುರ್ದೈವಿ.
ಬುಧವಾರ ಸಂಜೆ ಸ್ನೇಹಿತರಾದ ಶಾಹದ್, ಶಹೀದ್, ಅಝೀಮ್ ಹಾಗೂ ನೌಫಲ್ ಎಂಬವರೊಂದಿಗೆ ಹಾರಂಗಿ ಹಿನ್ನೀರು ಪ್ರದೇಶದ ಹೇರೂರಿಗೆ ತೆರಳಿದ್ದ ರಮೀಝ್ ಸಂಜೆ 5.45ರ ಸುಮಾರಿಗೆ ಈಜಲೆಂದು ನೀರಿಗೆ ಇಳಿದಿದ್ದಾನೆ.
ಸುಮಾರು ದೂರದವರೆಗೂ ಈಜಿದ ರಮೀಝ್ ವಾಪಾಸಾಗುವ ವೇಳೆ ಸುಸ್ತಾಗಿ ನೀರಿನಲ್ಲಿ ಮುಳುಗಿದ್ದಾನೆ. ಆದರೆ ಆತ ಮತ್ತೆ ಮೇಲೆ ಏಳಲೇ ಇಲ್ಲ. ವಿಷಯ ತಿಳಿದ ಸ್ಥಳೀಯ ಈಜುಗಾರರು ಕತ್ತಲಲ್ಲೇ ಮೃತದೇಹವನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿ,ಪ್ರಕರಣ ದಾಖಲಿಸಿಕೊಂಡಿದ್ದಾರೆ.



