ಯುವಜನೋತ್ಸವ: ಮಣ್ಣಿನಲ್ಲಿ ಮೂಡಿದ ಮೇಕ್ ಇನ್ ಇಂಡಿಯಾ!

ಹೊಸದಿಗಂತ, ವರದಿ, ಧಾರವಾಡ:

ನಿತೀಶ ಡಂಬಳ

ತಾಳ್ಮೆ, ಸಂಯಮ, ಏಕಾಗ್ರತೆ, ಸೂಕ್ಷ್ಮತೆಯ ಗಮನ ಎಲ್ಲವೂ ಸರಿಸಮಾನವಾದಾಗ ಕಲೆಯಲ್ಲಿ ಉತ್ಕೃಷ್ಟತೆ ಸಾಧ್ಯ. ಒಂದು ಕಡೆ ಮಣ್ಣಿನ ಕಲಾಕೃತಿಯಾದರೆ ಮತ್ತೊಂದೆಡೆ ಚಿತ್ರಕಲೆ ಜೊತೆಗೆ ಛಾಯಾಚಿತ್ರಗಾರಿಕೆ. ಕಳೆದ ಮೂರು ದಿನಗಳಿಂದ ಕರ್ನಾಟಕ ವಿಶ್ವವಿದ್ಯಾಲಯದ ಹಸಿರು ಉದ್ಯಾನವನ ಯುವ ಕಲಾವಿದರ ಸಂಗಮವಾಗಿತ್ತು.

ಮಣ್ಣಿನಲ್ಲಿ ಮೇಕ್ ಇನ್ ಇಂಡಿಯಾ ಮೂಡಿಬಂದರೆ, ಚಿತ್ರಕಲೆಯಲ್ಲಿ ಭವಿಷ್ಯದ ಭಾರತ ಗೋಚರವಾಗಿತ್ತು. ಭಾರತ @ ೨೦೪೭ ಪರಿಕಲ್ಪನೆ ಆಧಾರದ ಮೇಲೆ ಯುವ ಚಿತ್ರಕಲಾವಿದರು ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಮೆಟ್ರೊ, ಬಾಹ್ಯಾಕಾಶ, ವಿಜ್ಞಾನ-ತಂತ್ರಜ್ಞಾನದ ಮುಂದುವರಿಕೆ, ವಿಶ್ವಗುರು ಭಾರತ, ಗ್ರೀನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮುಂತಾದ ಪರಿಕಲ್ಪನೆಗಳು ದೃಶ್ಯಕಲೆಯ ಮೂಲಕ ಮೂಡಿಬಂದವು. ಮೂರು ದಿನ ಮೂರು ಹಂತದಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡು ದಿನ ಫ್ರಿ ಹ್ಯಾಂಡ್ ಹಾಗೂ ಒಂದು ದಿನ ಪರಿಕಲ್ಪನೆ ಆಧಾರಿತವಾಗಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು.

ಇನ್ನೂ ಮಣ್ಣಿನ ಕಲಾಕೃತಿಗಳಂತೂ ಬಹಳ ಗಮನ ಸೆಳೆದವು. ದೇಶದ ಅನ್ಯಾನ್ಯ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ಆಗಮಿಸಿದ ಕಲಾವಿದರು ತಮ್ಮ ಕೈಚಳಕ ಪ್ರದರ್ಶಿಸಿದರು. ಮಣ್ಣಿನ ಕಲಾಕೃತಿಗಾಗಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ನೀಡಲಾಗಿದ್ದು, ಕಲಾವಿದರಿಗೆ ಮೂರು ದಿನಗಳ ಸಮಯಾವಕಾಶ ನೀಡಲಾಗಿತ್ತು. ಮೇಕ್ ಇನ್ ಇಂಡಿಯಾದ ಲಾಂಛನವಾದ ಸಿಂಹ, ವಿಜ್ಞಾನ-ತಂತ್ರಜ್ಞಾನ, ಕಲೆ, ಕ್ರೀಡೆ, ಭಾರತ ನಕಾಶೆ, ಬುದ್ಧ, ನರೇಂದ್ರ ಮೋದಿ ಅವರ ಮುಖ ಮುಂತಾದವುಗಳು ಕಲಾವಿದರ ಪರಿಕಲ್ಪನೆಗಳಾಗಿ ಹೊರಹೊಮ್ಮಿದವು. ಇನ್ನೂ ಛಾಯಾಚಿತ್ರಗಾರರಿಗೆ ಪೂರ್ತಿ ಯುವಜನೋತ್ಸವದ ಕಾರ್ಯಕ್ರಮಗಳನ್ನೇ ವಿಷಯವಾಗಿ ನೀಡಲಾಗಿತ್ತು. ಎಲ್ಲ ಛಾಯಾಗ್ರಾಹಕರು ಸಕ್ರಿಯವಾಗಿ ಪಾಲ್ಗೊಂಡರು.

ಸ್ಥಳೀಯರಿಗೆ ಅವಕಾಶ
ಯುವ ಕಲಾವಿದರ ಶಿಬಿರ ಕೇವಲ ಯುವಜನೋತ್ಸವದ ಸ್ಪರ್ಧಾಳುಗಳಿಗೆ ಮಾತ್ರವಲ್ಲದೇ ಇದೇ ಮೊದಲ ಬಾರಿಗೆ ಸ್ಥಳೀಯ ಕಲಾವಿದರಿಗೂ ತಮ್ಮ ಕಲಾಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸಿದ್ದು ವಿಶೇಷ. ಅನ್ಯ ರಾಜ್ಯಗಳ 108 ಕಲಾವಿದರು ಹಾಗೂ ಸ್ಥಳೀಯ 130ಕ್ಕೂ ಅಧಿಕ ಕಲಾವಿದರು ಚಿತ್ರಕಲೆ, ಮಣ್ಣಿನ ಕಲಾಕೃತಿ ಹಾಗೂ ಫೊಟೊಗ್ರಾಫಿ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!