October 16, 2026
Friday, October 16, 2026
spot_img

‘ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲೂ ಸರ್ಕಾರ ಬದಲಿಸುವ ಹುನ್ನಾರ’: ಕಾಂಗ್ರೆಸ್‌ ವಿರುದ್ಧ ರಾಜನಾಥ್‌ ಸಿಂಗ್‌ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವಾಗ್ದಾಳಿ ನಡೆಸಿದ್ದಾರೆ.

ಯುವಜನರ ಶಕ್ತಿಯನ್ನು ದೇಶದ ಅಭಿವೃದ್ಧಿಗೆ ಬಳಸುವ ಬದಲು ರಾಜಕೀಯ ಸಂಘರ್ಷ ಮತ್ತು ಅರಾಜಕತೆ ಸೃಷ್ಟಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆದ ಸರ್ಕಾರ ಪತನದ ಮಾದರಿಯಲ್ಲಿ ಭಾರತದಲ್ಲೂ ಆಡಳಿತ ಬದಲಾವಣೆಗೆ ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ ಎಂಬುದು ಅವರ ಪ್ರಮುಖ ಆರೋಪವಾಗಿದೆ.

ಯುವಜನರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ

ಲಖನೌನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜನಾಥ್‌ ಸಿಂಗ್‌, ಪ್ರಜಾಪ್ರಭುತ್ವದ ಹೆಸರಿನಲ್ಲಿ ಗೊಂದಲ ಸೃಷ್ಟಿಸಲು ಅಥವಾ ಸಂವಿಧಾನಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರಲು ಯಾರಿಗೂ ಅವಕಾಶವಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಹಾಗೂ ಅದರ ರಾಜಕೀಯ ಮಿತ್ರಪಕ್ಷಗಳು ಯುವಕರನ್ನು ರಾಜಕೀಯ ಸಂಘರ್ಷಕ್ಕೆ ಬಳಸಿಕೊಳ್ಳುತ್ತಿವೆ. ದೇಶ ನಿರ್ಮಾಣದಲ್ಲಿ ತೊಡಗಬೇಕಾದ ಯುವಜನರನ್ನು ಅರಾಜಕತೆಯ ರಾಜಕಾರಣಕ್ಕೆ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ:

ಬಾಂಗ್ಲಾದೇಶದ ಬೆಳವಣಿಗೆಗಳಿಂದ ಪ್ರೇರಣೆ

ವಿರೋಧ ಪಕ್ಷಗಳ ನಾಯಕರು ಬಾಂಗ್ಲಾದೇಶದ ಬೆಳವಣಿಗೆಗಳಿಂದ ಪ್ರೇರಣೆ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ ಮತ್ತು ಸರ್ಕಾರವನ್ನು ಕೆಳಗಿಳಿಸುವ ಮಾತುಗಳನ್ನಾಡಿದ್ದಾರೆ ಎಂದು ಸಿಂಗ್‌ ಆರೋಪಿಸಿದರು. ಇಂತಹ ಹೇಳಿಕೆಗಳು ಅವರ ಹೋರಾಟವು ಕೇವಲ ಚುನಾವಣಾ ಸುಧಾರಣೆಗಳಿಗೆ ಸೀಮಿತವಾಗಿಲ್ಲ ಎಂಬುದನ್ನು ತೋರಿಸುತ್ತವೆ ಎಂದು ಅಭಿಪ್ರಾಯಪಟ್ಟರು. ರಾಜಕೀಯ ಸ್ವಾರ್ಥಕ್ಕಾಗಿ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಬಲಿಕೊಡಬಾರದು ಎಂದೂ ಎಚ್ಚರಿಸಿದರು.

ದೇಶದ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ

ಸುಪ್ರೀಂ ಕೋರ್ಟ್‌ನ ಇತ್ತೀಚಿನ ಅಭಿಪ್ರಾಯಗಳನ್ನು ಉಲ್ಲೇಖಿಸಿದ ರಾಜನಾಥ್‌ ಸಿಂಗ್‌, ಕಾನೂನಿಗೆ ಗೌರವ ನೀಡುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರಜಾಪ್ರಭುತ್ವದ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು. ಸುಳ್ಳು ಪ್ರಚಾರ, ಆಕ್ರೋಶ ಮತ್ತು ಸಂಸ್ಥೆಗಳ ವಿರುದ್ಧದ ಆರೋಪಗಳಿಂದ ದೇಶದ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ ಎಂದರು.

Must Read