October 18, 2026
Sunday, October 18, 2026
spot_img

ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್: 137 ಔಷಧಗಳ ಬೆಲೆ ಶೇ.70ರಷ್ಟು ಇಳಿಕೆ, ನ. 9ರಿಂದ ಹೊಸ ದರ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆಯಿಂದ ಕಂಗಾಲಾಗಿರುವ ರೋಗಿಗಳಿಗೆ ಇದೀಗ ಸ್ವಲ್ಪ ನೆಮ್ಮದಿ ಸಿಗಲಿದೆ.

ದುಬಾರಿ ಔಷಧಗಳ ಬೆಲೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, 137 ಕ್ಯಾನ್ಸರ್ ಔಷಧಗಳ ವ್ಯಾಪಾರ ಲಾಭದ ಮಿತಿಯನ್ನು ಶೇ.30ಕ್ಕೆ ನಿಗದಿಪಡಿಸಲಾಗಿದೆ. ಈ ಕ್ರಮದಿಂದ ನವೆಂಬರ್ 9ರಿಂದ ಕೆಲವು ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆಯಾಗುವ ಸಾಧ್ಯತೆಯಿದ್ದು, ಚಿಕಿತ್ಸೆಯ ವೆಚ್ಚ ತಗ್ಗುವ ನಿರೀಕ್ಷೆ ಮೂಡಿದೆ.

137 ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣಕ್ಕೆ ಕ್ರಮ

ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) 137 ಔಷಧಗಳ ವ್ಯಾಪಾರ ಲಾಭದ ಮಿತಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಔಷಧ ಬೆಲೆ ನಿಯಂತ್ರಣ ಆದೇಶ–2013ರ ಪ್ಯಾರಾಗ್ರಾಫ್ 19ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪೇಟೆಂಟ್ ಹೊಂದಿರುವ ಕೆಲವು ಔಷಧಗಳನ್ನೂ ಈ ಪಟ್ಟಿಯಲ್ಲಿ ಸೇರಿಸಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ:

ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಮತ್ತು ವಿತರಕರು ಅಥವಾ ಮಾರಾಟಗಾರರು ಖರೀದಿಸುವ ಬೆಲೆಯ ನಡುವಿನ ದೊಡ್ಡ ವ್ಯತ್ಯಾಸವನ್ನು ಕಡಿಮೆ ಮಾಡುವುದು ಈ ನಿರ್ಧಾರದ ಉದ್ದೇಶವಾಗಿದೆ. ಕೆಲವು ಔಷಧಗಳ ಒಂದು ವಯಲ್ ಅಥವಾ ಪ್ಯಾಕ್ ಬೆಲೆ 5 ಲಕ್ಷದವರೆಗೂ ಇರುವುದರಿಂದ, ಬೆಲೆ ನಿಯಂತ್ರಣವು ರೋಗಿಗಳಿಗೆ ನೆರವಾಗಬಹುದು.

ಕಂಪನಿಗಳಿಗೆ ಹೊಸ ಬೆಲೆಪಟ್ಟಿ ಪ್ರಕಟಿಸುವ ಸೂಚನೆ

ಪರಿಷ್ಕೃತ ಬೆಲೆಗಳನ್ನು ಅಧಿಸೂಚನೆ ಪ್ರಕಟವಾದ ಏಳು ದಿನಗಳೊಳಗೆ NPPAಗೆ ತಿಳಿಸುವಂತೆ ಔಷಧ ತಯಾರಿಕಾ ಕಂಪನಿಗಳಿಗೆ ಸೂಚಿಸಲಾಗಿದೆ. ಹೊಸ ಬೆಲೆಪಟ್ಟಿಯನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವುದರ ಜೊತೆಗೆ, ಔಷಧ ಮಾರಾಟಗಾರರು ಮತ್ತು ಆಸ್ಪತ್ರೆಗಳಿಗೂ ಮಾಹಿತಿ ನೀಡಬೇಕು. ಆಸ್ಪತ್ರೆಗಳು ಕೂಡ ಪರಿಷ್ಕೃತ ಬೆಲೆಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಸ್ಪಷ್ಟವಾಗಿ ಪ್ರಕಟಿಸಬೇಕಿದೆ.

ಔಷಧಗಳ ಪೂರೈಕೆ ನಿರಂತರವಾಗಿರುವುದನ್ನು ಖಚಿತಪಡಿಸಲು ಪ್ರಾಧಿಕಾರ ಕ್ರಮ ಕೈಗೊಂಡಿದ್ದು, ಉತ್ಪಾದನೆಯನ್ನು ಕಡಿಮೆ ಮಾಡಲು ಉದ್ದೇಶಿಸುವ ಕಂಪನಿಗಳು ಅನುಮತಿ ಪಡೆಯಬೇಕಾಗುತ್ತದೆ. ನಿಯಮಗಳ ಪಾಲನೆಯನ್ನು ರಾಜ್ಯ ಔಷಧ ನಿಯಂತ್ರಕರು ಮೇಲ್ವಿಚಾರಣೆ ಮಾಡಲಿದ್ದಾರೆ.

ರೋಗಿಗಳಿಗೆ ಬೆಲೆ ಪರಿಶೀಲನೆಗೆ ಅವಕಾಶ

ಗ್ರಾಹಕರು ಔಷಧಗಳ ಪರಿಷ್ಕೃತ ಬೆಲೆಗಳನ್ನು ಪರಿಶೀಲಿಸಲು ‘Pharma Sahi Daam’ ಆ್ಯಪ್ ಹಾಗೂ NPPA ವೆಬ್‌ಸೈಟ್ ಬಳಸಬಹುದು. 2019ರಲ್ಲಿಯೂ 526 ಬ್ರ್ಯಾಂಡ್‌ಗಳ ಕ್ಯಾನ್ಸರ್ ಔಷಧಗಳ ಬೆಲೆಯನ್ನು ಶೇ.90ರವರೆಗೆ ಕಡಿತಗೊಳಿಸಲಾಗಿತ್ತು.

Must Read