ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗಳಿಂದ ಹುಬ್ಬಳ್ಳಿಯ ಕೇಶ್ವಾಪುರದ ಮಯೂರಿ ಎಸ್ಟೇಟ್ ನಿವಾಸಿಗಳ ಜೀವ ಮತ್ತು ಆಸ್ತಿಗೆ ಯಾವುದೇ ಅಪಾಯ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿದೆ.
ಈ ಸಂಬಂಧ ಸಲ್ಲಿಕೆಯಾಗಿರುವ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾಧಿಕಾರಿ ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ.
ವಸತಿ ಪ್ರದೇಶದಲ್ಲಿ ಪ್ರತಿಭಟನೆಗೆ ಆಕ್ಷೇಪ
ಮಯೂರಿ ಎಸ್ಟೇಟ್ ನಿವಾಸಿಗಳಾದ ಸಂಗಮ್ನಾಥ ಹಂಜಿ ಸೇರಿದಂತೆ ಎಂಟು ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡುವ ವೇಳೆ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಇದನ್ನೂ ಓದಿ:
ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತ ಸಂಘಟನೆಗಳು ಪ್ರತಿಭಟನೆ, ರ್ಯಾಲಿ, ಮೆರವಣಿಗೆ, ಧರಣಿ ಅಥವಾ ಮುತ್ತಿಗೆ ನಡೆಸುವ ಸಂದರ್ಭದಲ್ಲಿ, ಅವುಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿಯೇ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂಬುದು ಅರ್ಜಿದಾರರ ಮನವಿಯಾಗಿತ್ತು. ವಸತಿ ಪ್ರದೇಶದಲ್ಲಿ ಇಂತಹ ಪ್ರತಿಭಟನೆಗಳು ನಡೆದರೆ ಸ್ಥಳೀಯ ನಿವಾಸಿಗಳ ದೈನಂದಿನ ಜೀವನ ಹಾಗೂ ಸುರಕ್ಷತೆಗೆ ತೊಂದರೆಯಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.
ಮೂಲಭೂತ ಹಕ್ಕುಗಳ ಉಲ್ಲಂಘನೆಯ ಆತಂಕ
ಅರ್ಜಿದಾರರ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ವಸತಿ ಪ್ರದೇಶದಲ್ಲಿ ನಡೆಯುವ ಪ್ರತಿಭಟನೆಗಳಿಂದ ನಿವಾಸಿಗಳಿಗೆ ಸಂವಿಧಾನದ 19(1)(ಡಿ) ವಿಧಿಯಡಿ ದೊರೆಯುವ ಸಂಚಾರ ಸ್ವಾತಂತ್ರ್ಯ ಹಾಗೂ 21ನೇ ವಿಧಿಯಡಿ ಖಾತರಿಪಡಿಸಿರುವ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್, ಜೀವ ಮತ್ತು ಆಸ್ತಿಯ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಪ್ರತಿಭಟನೆಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.



