ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ನ ಐಚಿ-ನಗೋಯಾದಲ್ಲಿ ಅದ್ಧೂರಿಯಾಗಿ ಚಾಲನೆ ಪಡೆದುಕೊಂಡಿರುವ 2026ರ ಏಷ್ಯನ್ ಪ್ಯಾರಾ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶುಭ ಹಾರೈಸಿದ್ದಾರೆ. ಕ್ರೀಡಾಪಟುಗಳ ಉತ್ಸಾಹ ಮತ್ತು ಛಲವು ದೇಶದ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.
ಭಾನುವಾರ ಜಪಾನ್ನ ನಗೋಯಾದ ಪಲೋಮಾ ಮಿಜುಹೊ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಮತ್ತು ಓಟಗಾರ್ತಿ ಸಿಮ್ರಾನ್ ಶರ್ಮಾ ಅವರು ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ಭಾರತೀಯ ತಂಡವನ್ನು ಮುನ್ನಡೆಸಿದರು.
X’ ನಲ್ಲಿ ಪ್ರಧಾನಿ ಮೋದಿ ಸಂದೇಶ
ಈ ಬಗ್ಗೆ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಜಪಾನ್ನಲ್ಲಿ ಏಷ್ಯನ್ ಪ್ಯಾರಾ ಗೇಮ್ಸ್ ಕ್ರೀಡಾಕೂಟ ಆರಂಭವಾಗುತ್ತಿದ್ದು, ಭಾರತೀಯ ಕ್ರೀಡಾಪಟುಗಳ ತಂಡಕ್ಕೆ ನನ್ನ ಹಾರ್ದಿಕ ಶುಭಾಶಯಗಳು. ನಮ್ಮ ಅದ್ಭುತ ಪ್ಯಾರಾ ಅಥ್ಲೀಟ್ಗಳ ಸಾಧನೆಯ ಬಗ್ಗೆ ಇಡೀ ಭಾರತ ಹೆಮ್ಮೆಪಡುತ್ತದೆ. ಅವರ ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಮತ್ತು ಸೋಲನ್ನೊಪ್ಪದ ಛಲವು 140 ಕೋಟಿ ಭಾರತೀಯರಿಗೆ ದೊಡ್ಡ ಸ್ಪೂರ್ತಿಯಾಗಿದೆ. ಅವರೆಲ್ಲರೂ ಪೂರ್ಣ ಆತ್ಮವಿಶ್ವಾಸದಿಂದ ಸ್ಪರ್ಧಿಸಿ, ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿ” ಎಂದು ತಿಳಿಸಿದ್ದಾರೆ.
ಈ ಬಾರಿ 168 ಕ್ರೀಡಾಪಟುಗಳ ಸಣ್ಣ ಪಡೆ
ಕೇಂದ್ರ ಕ್ರೀಡಾ ಸಚಿವಾಲಯವು ಈ ಬಾರಿ ಭಾರತದ ವತಿಯಿಂದ ಒಟ್ಟು 281 ಸದಸ್ಯರ ತಂಡಕ್ಕೆ ಅನುಮತಿ ನೀಡಿದ್ದು, ಇದರಲ್ಲಿ 168 ಕ್ರೀಡಾಪಟುಗಳು (112 ಪುರುಷರು ಮತ್ತು 56 ಮಹಿಳೆಯರು) ಸೇರಿದ್ದಾರೆ. ಇವರು 11 ವಿವಿಧ ಕ್ರೀಡಾ ವಿಭಾಗಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 2023ರಲ್ಲಿ ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಕ್ರೀಡಾಕೂಟಕ್ಕೆ ಹೋಲಿಸಿದರೆ ಈ ಬಾರಿ ಕ್ರೀಡಾಪಟುಗಳ ಸಂಖ್ಯೆ ಕಡಿಮೆಯಾಗಿದೆ. ಕೆಲವು ಕ್ರೀಡೆಗಳನ್ನು ಕೈಬಿಟ್ಟಿರುವುದು ಮತ್ತು ಸಂಘಟಕರ ಕಠಿಣ ನಿಯಮಗಳೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಕ್ರೀಡಾ ಹಬ್ಬವು ಅಕ್ಟೋಬರ್ 18 ರಿಂದ 24 ರವರೆಗೆ ನಡೆಯಲಿದೆ.
ಭಾರತಕ್ಕೆ ಪದಕದ ಬೇಟೆ ಗ್ಯಾರಂಟಿ
ಕಳೆದ ಬಾರಿ ಭಾರತ ಬರೋಬ್ಬರಿ 111 ಪದಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿತ್ತು. ಈ ಬಾರಿಯೂ ಭಾರತದ ಸ್ಟಾರ್ ಆಟಗಾರರು ಕಣದಲ್ಲಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.
ಆ ಪೈಕಿ ಸುಮಿತ್ ಅಂಟಿಲ್ ಹಾಗೂ ನವದೀಪ್ ಸಿಂಗ್ ಅವರು ಪ್ಯಾರಾ ಅಥ್ಲೆಟಿಕ್ಸ್ ಮತ್ತು ಜಾವೆಲಿನ್ ಥ್ರೋನಲ್ಲಿ ಮತ್ತೊಮ್ಮೆ ಚಿನ್ನಕ್ಕೆ ಗುರಿ ಇಟ್ಟಿದ್ದಾರೆ. ಅವನಿ ಲೇಖರಾ ಶೂಟಿಂಗ್ ವಿಭಾಗದಲ್ಲಿ ಭಾರತದ ಚಿನ್ನದ ಹುಡುಗಿ ಎಂದೇ ಹೆಸರಾದ ಇವರು ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿದ್ದಾರೆ. ಶೀತಲ್ ದೇವಿ 19 ವರ್ಷದ ವಿಶ್ವವಿಖ್ಯಾತ ಬಿಲ್ಲುಗಾರ್ತಿ ತನ್ನ ಕಾಂಪೌಂಡ್ ವಿಭಾಗದ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಲಿದ್ದಾರೆ. ಪ್ರಮೋದ್ ಭಗತ್ ಹಾಗೂ ಸುಹಾಸ್ ಯತಿರಾಜ್ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಭಾರತದ ಶಕ್ತಿಯಾಗಿದ್ದಾರೆ.
ಇದನ್ನೂ ಓದಿ:
2010ರಲ್ಲಿ ಕೇವಲ 14 ಪದಕ ಗೆದ್ದಿದ್ದ ಭಾರತ, ಇಂದು 100ಕ್ಕೂ ಹೆಚ್ಚು ಪದಕ ಗೆಲ್ಲುವ ಹಂತಕ್ಕೆ ಬೆಳೆದು ನಿಂತಿರುವುದು ಭಾರತೀಯ ಕ್ರೀಡಾ ಇತಿಹಾಸದ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಕ್ರೀಡಾಪಟುಗಳು ಜಪಾನ್ ನೆಲದಲ್ಲಿ ಮತ್ತೊಮ್ಮೆ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯಲಿ ಎಂಬುದೇ ದೇಶವಾಸಿಗಳ ಹಾರೈಕೆ.



