ಹೊಸದಿಗಂತ ವರದಿ ಬೆಳಗಾವಿ:
ರಾಷ್ಟ್ರೀಯ ಸ್ವಯಂಸೇವಕ ಸಂಘದ 101ನೇ ವರ್ಷಾಚರಣೆ ಹಾಗೂ ವಿಜಯದಶಮಿ ನಿಮಿತ್ತ ಬೆಳಗಾವಿ ತಾಲೂಕು ಗ್ರಾಮಾಂತರ ವಿಭಾಗದ ವತಿಯಿಂದ ಭಾನುವಾರ ಹಿಂಡಲಗಾದ ಕಲ್ಲಮೇಶ್ವರ ದೇವಸ್ಥಾನದ ಆವರಣದಲ್ಲಿ ಭವ್ಯ ಪಥಸಂಚಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಭಾರತ ಮಾತೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸುವ ಮೂಲಕ ಕರ್ನಲ್ ಮೋಹನ್ ನಾಯಕ ಹಾಗೂ ರಾಮಚಂದ್ರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸಂಘದ ಸ್ವಯಂಸೇವಕರು ಶಿಸ್ತುಬದ್ಧವಾಗಿ ಪಥಸಂಚಲನದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಾಂತ ಪ್ರಮುಖ ರಾಮಚಂದ್ರ ಅವರು, ವಿಜಯದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾಮಾತೆಯನ್ನು ವಿವಿಧ ರೂಪಗಳಲ್ಲಿ ಆರಾಧಿಸುವ ಮೂಲಕ ಶಕ್ತಿಯನ್ನು ಪಡೆಯಲಾಗುತ್ತದೆ. ಧರ್ಮ, ನ್ಯಾಯ ಹಾಗೂ ನೀತಿಯ ರಕ್ಷಣೆಗಾಗಿ ಶಕ್ತಿಯ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ವಿಜಯದಶಮಿಯಂದು ಶಸ್ತ್ರಪೂಜೆಗೆ ವಿಶೇಷ ಮಹತ್ವವಿದೆ ಎಂದು ಹೇಳಿದರು.

ಹಿಂದವೀ ಸ್ವರಾಜ್ಯದ ಸ್ಥಾಪನೆಯ ಇತಿಹಾಸವನ್ನು ಸ್ಮರಿಸಿದ ಅವರು, ಧರ್ಮದ ರಕ್ಷಣೆಗಾಗಿ ಶಕ್ತಿಯನ್ನು ಬಳಸಬೇಕು. ರಾಮಾಯಣದಲ್ಲಿ ರಾವಣನಿಗೆ ಬಲಿಷ್ಠ ಸೈನ್ಯ ಹಾಗೂ ಸುವರ್ಣಲಂಕೆ ಇದ್ದರೂ, ಶ್ರೀರಾಮನ ಧರ್ಮನಿಷ್ಠೆ ಮತ್ತು ವಾನರ ಸೇನೆಯ ಸಂಘಟಿತ ಹೋರಾಟ ಜಯ ತಂದುಕೊಟ್ಟಿತು. ಸಂಘಟನೆಯ ಶಕ್ತಿ ಹಾಗೂ ಧರ್ಮದ ಮಾರ್ಗದಲ್ಲಿ ನಡೆಯುವ ಮಹತ್ವವನ್ನು ಇತಿಹಾಸ ನಮಗೆ ತಿಳಿಸುತ್ತದೆ ಎಂದರು.
ದೇಶದಲ್ಲಿ ಅಧರ್ಮ ಹೆಚ್ಚಾದ ಸಂದರ್ಭದಲ್ಲಿ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಯಿತು. ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಹೋರಾಟ ಸ್ಮರಣೀಯವಾಗಿದೆ. ಆದರೆ, ಆಂತರಿಕ ದ್ರೋಹ ಹಾಗೂ ಮೋಸದಿಂದ ಅನೇಕ ಹೋರಾಟಗಾರರು ಸಂಕಷ್ಟಕ್ಕೆ ಸಿಲುಕಬೇಕಾಯಿತು. ದೇಶದ ಏಕತೆ ಮತ್ತು ಸಂಘಟನೆಯ ಮಹತ್ವವನ್ನು ಇಂತಹ ಐತಿಹಾಸಿಕ ಘಟನೆಗಳು ತಿಳಿಸಿಕೊಡುತ್ತವೆ ಎಂದು ಹೇಳಿದರು.

ದೇಶದ ರಕ್ಷಣೆಗೆ ಸಂಘಟಿತ ಸಮಾಜ ಅಗತ್ಯ: ಕರ್ನಲ್ ಮೋಹನ್ ನಾಯಕ
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಲ್ ಮೋಹನ್ ನಾಯಕ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಗಿ 101 ವರ್ಷಗಳು ಕಳೆದಿವೆ. ಅಂದಿನಿಂದ ಇಂದಿನವರೆಗೂ ದೇಶದ ರಕ್ಷಣೆ, ಸಮಾಜದ ಸಂಘಟನೆ ಹಾಗೂ ಹಿಂದೂ ಧರ್ಮದ ಸಂರಕ್ಷಣೆಯ ಕಾರ್ಯದಲ್ಲಿ ಸಂಘ ತೊಡಗಿಸಿಕೊಂಡಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ಆರಂಭವಾಗುವ ಮೂಲಕ ಶಿಸ್ತು ಮತ್ತು ಸಮಯಪಾಲನೆಗೆ ಮಾದರಿಯಾಗಿವೆ. ದೇಶದ ರಕ್ಷಣೆ, ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದು ಹಾಗೂ ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸುವುದು ಸಂಘದ ಪ್ರಮುಖ ಕಾರ್ಯಗಳಾಗಿವೆ ಎಂದರು.
ಇದನ್ನೂ ಓದಿ:
ದೇಶದ ಭದ್ರತೆ ಮತ್ತು ಆಂತರಿಕ ಸವಾಲುಗಳ ಕುರಿತು ಜಾಗೃತರಾಗಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸೈನಿಕರು ದೇಶದ ಗಡಿಗಳನ್ನು ರಕ್ಷಿಸುತ್ತಿದ್ದರೆ, ಸಂಘಟಿತ ಸಮಾಜವೂ ದೇಶದ ಭದ್ರತೆ ಹಾಗೂ ಏಕತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಹಿಂದೂ ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕು ಗ್ರಾಮಾಂತರ ವ್ಯಾಪ್ತಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.



