ಹೊಸದಿಗಂತ ವರದಿ ಯಲ್ಲಾಪುರ:
ತಾಲೂಕಿನ ಬಿಸಗೋಡ ಗ್ರಾಮದ ಯುವಕನೋರ್ವ ಶಿರಸಿಯಲ್ಲಿ ಬೈಕ್ ಸರ್ವೀಸ್ ಮುಗಿಸಿಕೊಂಡು ತಡರಾತ್ರಿ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಭೀಕರ ಬೈಕ್ ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ತಾಲೂಕಿನ ಬಿಸಗೋಡ ಗ್ರಾಮದ ಕೆಳಗಿನಪಾಲ ನಿವಾಸಿಯಾದ ವಿವೇಕ ದತ್ತಾತ್ರೇಯ ಭಟ್ಟ (25) ಮೃತಪಟ್ಟ ದುರ್ದೈವಿ ಯುವಕ.
ಯುವಕ ವಿವೇಕ ಭಟ್ಟ ತಮ್ಮ ಬೈಕ್ ಅನ್ನು ಸರ್ವಿಸಿಂಗ್ಗಾಗಿ ಶಿರಸಿಯ ಶೋರೂಮ್ಗೆ ನೀಡಿದ್ದರು. ಅಕ್ಟೋಬರ್ 17 ರಂದು ಶನಿವಾರ ಸಂಜೆ ಬೈಕ್ ತರಲೆಂದು ಅವರು ಬಸ್ ಹತ್ತಿ ಶಿರಸಿಗೆ ತೆರಳಿದ್ದರು. ಬೈಕ್ ಪಡೆದುಕೊಂಡು ವಾಪಸ್ ಹೊರಟಿದ್ದ ವಿವೇಕ, ತಡರಾತ್ರಿ ಸುಮಾರು 11 ಗಂಟೆಯ ವೇಳೆಗೆ ತಮ್ಮ ತಂದೆಗೆ ಕರೆ ಮಾಡಿ, ಶಿರಸಿಯಿಂದ ಊರಿಗೆ ಹೊರಟಿದ್ದೇನೆ ಎಂದು ತಿಳಿಸಿದ್ದರು.
ಆದರೆ ಅಕ್ಟೋಬರ್ 18ರ ಭಾನುವಾರ ಬೆಳಿಗ್ಗೆ 7.45ರ ಸುಮಾರಿಗೆ ವಿವೇಕ ಅವರ ಸಂಬಂಧಿಕರ ಮೊಬೈಲ್ಗೆ ಕೆರೆ ಬಂದಿದ್ದು, ತಾರೆಹಳ್ಳಿ ಬಸ್ ನಿಲ್ದಾಣದ ಸಮೀಪ ವಿವೇಕ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿರುವ ಎಂದು ತಿಳಿಸಿದ್ದಾರೆ.
ತಡರಾತ್ರಿ ಊರಿಗೆ ಬರುವಾಗ ಬೈಕ್ ಅತಿವೇಗ ಹಾಗೂ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬೈಕ್ನಿಂದ ಬಿದ್ದ ರಭಸಕ್ಕೆ ವಿವೇಕ ಅವರ ತಲೆ ಮತ್ತು ಮುಖಕ್ಕೆ ಗಂಭೀರ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:
ಈ ಘಟನೆಗೆ ಸಂಬಂಧಿಸಿದಂತೆ ಮೃತರ ಸಂಬಂಧಿ ಮಂಜುನಾಥ ಭಟ್ಟ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಯಲ್ಲಾಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



