October 20, 2026
Tuesday, October 20, 2026
spot_img

ರಜನಿಕಾಂತ್ ‘ಜೈಲರ್ 2’ ಸಿನಿಮಾ ವೀಕ್ಷಿಸಲು ಇಡೀ ಚಿತ್ರಮಂದಿರ ಬುಕ್ ಮಾಡಿದ ಸಂಜು ಸ್ಯಾಮ್ಸನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಸೂಪರ್‌ಸ್ಟಾರ್‌ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ‘ತಲೈವಾ’ ನಟನೆಯ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರಕ್ಕಾಗಿ ಸಂಜು ತಮ್ಮ ಅಭಿಮಾನವನ್ನು ವಿಭಿನ್ನವಾಗಿ ಮೆರೆದಿದ್ದು, ನೆಚ್ಚಿನ ನಟನ ಸಿನಿಮಾ ವೀಕ್ಷಿಸಲು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ್ದಾರೆ.

ಮೊದಲ ದಿನ ಮಿಸ್ ಆಗಿದ್ದಕ್ಕೆ ಬೇಸರ

ರಜನಿಕಾಂತ್ ಅವರ ಸಿನಿಮಾಗಳನ್ನು ಒಟಿಟಿಯಲ್ಲಿ ಬರುವವರೆಗೆ ಕಾಯುವ ತಾಳ್ಮೆ ನನಗಿಲ್ಲ, ದೊಡ್ಡ ಪರದೆಯ ಮೇಲೆಯೇ ನೋಡಬೇಕು ಎನ್ನುವ ಸಂಜು ಸ್ಯಾಮ್ಸನ್, ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ನೋಡಲು ಪ್ಲ್ಯಾನ್ ಮಾಡಿದ್ದರು. ಆದರೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರ ಬ್ಯುಸಿ ಶೆಡ್ಯೂಲ್‌ನಿಂದಾಗಿ ಮೊದಲ ದಿನ ಸಿನಿಮಾ ಮಿಸ್ ಆಗಿತ್ತು. ಆ ಕೊರಗನ್ನು ನೀಗಿಸಲು ಮರುದಿನವೇ ಇಡೀ ಥಿಯೇಟರ್ ಕಾಯ್ದಿರಿಸಿ ತಮ್ಮ ಆಪ್ತರೊಂದಿಗೆ ಜೈಲರ್ 2 ವೀಕ್ಷಿಸಿದ್ದಾರೆ.

ಪತ್ನಿ, ಸ್ನೇಹಿತರು ಮತ್ತು ಟೀಮ್ ಇಂಡಿಯಾ ಸಿಬ್ಬಂದಿಗೆ ಆಹ್ವಾನ

ಈ ಕುರಿತು ಮಾತನಾಡಿದ ಸಂಜು, “ಇಂದು ಇಡೀ ಚಿತ್ರಮಂದಿರವನ್ನು ಬುಕ್ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನನ್ನ ಪತ್ನಿ ಹಾಗೂ ಸ್ನೇಹಿತರನ್ನು ಆಹ್ವಾನಿಸಿದ್ದೇನೆ. ದೊಡ್ಡ ಪರದೆಯ ಮೇಲೆ ರಜನಿ ಸರ್ ಅವರನ್ನು ನೋಡಲು ತುಂಬಾ ಉತ್ಸುಕನಾಗಿದ್ದೇನೆ” ಎಂದಿದ್ದಾರೆ. ಇಷ್ಟೇ ಅಲ್ಲದೆ, ಭಾರತೀಯ ಕ್ರಿಕೆಟ್ ತಂಡದಲ್ಲಿ ತಮಿಳು ಭಾಷೆ ತಿಳಿದಿರುವ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಎಲ್ಲರನ್ನೂ ಈ ಪ್ರೈವೇಟ್ ಸ್ಕ್ರೀನಿಂಗ್‌ಗೆ ಸಂಜು ಆಹ್ವಾನಿಸಿದ್ದರು.

ಚಿಕ್ಕ ವಯಸ್ಸಿನ ಕನಸು ನನಸು

ಸಂಜು ಸ್ಯಾಮ್ಸನ್‌ಗೆ ಚಿಕ್ಕ ವಯಸ್ಸಾಗಿದ್ದಾಗಿನಿಂದಲೂ ರಜನಿಕಾಂತ್ ಅವರೇ ರೋಲ್ ಮಾಡೆಲ್. ಅವರು ಕ್ರಿಕೆಟರ್ ಆಗುವ ಮುನ್ನವೇ ರಜನಿ ಸಿನಿಮಾಗಳು ಅವರ ಬದುಕಿನ ಭಾಗವಾಗಿದ್ದವು. ಮಾರ್ಚ್ 2023 ರಲ್ಲಿ ರಜನಿಕಾಂತ್ ಅವರ ಕುಟುಂಬದ ನೆರವಿನಿಂದ ಚೆನ್ನೈನ ಸೂಪರ್‌ಸ್ಟಾರ್‌ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದಿದ್ದ ಸಂಜು, ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದರು.

ಇದನ್ನೂ ಓದಿ:

ಸಂಜು ಅವರ ಈ ‘ತಲೈವಾ’ ಕ್ರೇಜ್ ಭಾರತಕ್ಕಷ್ಟೇ ಸೀಮಿತವಾಗಿಲ್ಲ, 2023 ರಲ್ಲಿ ಟೀಮ್ ಇಂಡಿಯಾ ಐರ್ಲೆಂಡ್ ಪ್ರವಾಸದಲ್ಲಿದ್ದಾಗಲೂ ಅಲ್ಲಿ ವಿಶೇಷವಾಗಿ ‘ಜೈಲರ್’ ಮೊದಲ ಭಾಗದ ಪ್ರದರ್ಶನ ಏರ್ಪಡಿಸಿ ಸಂಜು ಸಿನಿಮಾ ವೀಕ್ಷಿಸಿದ್ದರು.

Must Read