ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 24 ಮತ್ತು 25 ರಂದು ವಾರಣಾಸಿ ಹಾಗೂ ಕೇದರನಾಥಕ್ಕೆ ಎರಡು ದಿನಗಳ ಮಹತ್ವದ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಈ ಪ್ರವಾಸದ ಅವಧಿಯಲ್ಲಿ ಅವರು ಕೈಗಾರಿಕಾ, ಸಾರ್ವಜನಿಕ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಪರಿಶೀಲನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ವಾರಣಾಸಿಯಲ್ಲಿ ಕೈಗಾರಿಕಾ ಯೋಜನೆಗಳ ಉದ್ಘಾಟನೆ
ತಮ್ಮ ಸ್ವಕ್ಷೇತ್ರವಾದ ವಾರಣಾಸಿಗೆ ಅಕ್ಟೋಬರ್ 24 ರಂದು ಭೇಟಿ ನೀಡಲಿರುವ ಪ್ರಧಾನಿ ಮೋದಿ, ಅಲ್ಲಿನ ಸೇವಾಪುರಿ ಪ್ರದೇಶದಲ್ಲಿ ನೂತನ ಫ್ಯಾಕ್ಟರಿಯೊಂದನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
‘ವಿಂಗ್ಸ್ ಓವರ್ ಗಂಗೆಸ್’ ವೈಮಾನಿಕ ಪ್ರದರ್ಶನ
ವಾರಣಾಸಿಯ ನಮೋ ಘಾಟ್ನಲ್ಲಿ ಅಕ್ಟೋಬರ್ 22, 24 ಮತ್ತು 25 ರಂದು ಭಾರತೀಯ ವಾಯುಪಡೆಯ (IAF) ಭವ್ಯ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿದೆ. ಅಕ್ಟೋಬರ್ 25 ರಂದು ನಡೆಯಲಿರುವ ಈ ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.
ರಫೇಲ್, ಸುಖೋಯ್ ಅಬ್ಬರ
ಈ ವೈಮಾನಿಕ ಪ್ರದರ್ಶನದಲ್ಲಿ ವಾಯುಪಡೆಯ ಅತ್ಯಾಧುನಿಕ ಯುದ್ಧವಿಮಾನಗಳಾದ ರಫೇಲ್, ಸುಖೋಯ್ ಮತ್ತು ತೇಜಸ್ ಫೈಟರ್ ಜೆಟ್ಗಳು ಹಾರಾಟ ನಡೆಸಲಿವೆ. ಇದರೊಂದಿಗೆ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ಮತ್ತು ಸಾರಂಗ್ ಹೆಲಿಕಾಪ್ಟರ್ ತಂಡಗಳು ಗಂಗಾ ನದಿಯ ಮೇಲೆ ಸಾಹಸ ಪ್ರದರ್ಶನ ನೀಡಲಿವೆ.
ಇದನ್ನೂ ಓದಿ:
ಕೇದರನಾಥ ಕಾರಿಡಾರ್ ಪರಿಶೀಲನೆ
ಅಕ್ಟೋಬರ್ 25 ರಂದು ಪ್ರಧಾನಿ ಮೋದಿ ಉತ್ತರಾಖಂಡದ ಪವಿತ್ರ ಯಾತ್ರಾಸ್ಥಳ ಕೇದರನಾಥಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಅವರು ಕೇದರನಾಥ ಕಾರಿಡಾರ್ ಅಭಿವೃದ್ಧಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಯಾತ್ರಾರ್ಥಿಗಳಿಗೆ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಕಾಮಗಾರಿಗಳನ್ನು ಅವರು ಖುದ್ದಾಗಿ ವೀಕ್ಷಿಸಲಿದ್ದಾರೆ.



