October 22, 2026
Thursday, October 22, 2026
spot_img

ಬೆಂಕಿ ಅವಘಡ; ಹೊಸ ಕೊಠಡಿ ಮಂಜೂರಾತಿ ಭರವಸೆ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಹೊಸದಿಗಂತ ವರದಿ ಅಂಕೋಲಾ:

ಇಲ್ಲಿಯ ತೆಂಕಣಕೇರಿ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 50 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದ ಕುರಿತಾಗಿ ಶಾಸಕ ಸತೀಶ ಸೈಲ್ ನೀಡಿದ ಮನವಿಗೆ ಸ್ಪಂದಿಸಿದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಅವರು ತಕ್ಷಣ ಹೊಸ ಕೊಠಡಿಗಳನ್ನು ಮಂಜೂರು ಮಾಡುವ ಭರವಸೆ ನೀಡಿದ್ದಾರೆ.

ಅಗ್ನಿ ದುರಂತದ ಸ್ಥಳಕ್ಕೆ ಗುರುವಾರ ಸಂಜೆ ಶಾಸಕ ಸತೀಶ ಸೈಲ್ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು. ಬೆಂಕಿ ಅನಾಹುತದಲ್ಲಿ ಆಗಿರುವ ಹಾನಿಯನ್ನು ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು.

ಬೆಂಕಿಗೆ ಎರಡು ಕೊಠಡಿಗಳು ಸಂಪೂರ್ಣ ಭಸ್ಮವಾಗಿದ್ದು ಇನ್ನೆರಡು ಕೊಠಡಿಗಳೂ ಜೀರ್ಣಗೊಂಡಿವೆ.ಕೊಠಡಿ ಒಳಗಿದ್ದ 5 ಲಕ್ಷ ರೂ. ಮೌಲ್ಯದ ಸ್ಮಾರ್ಟ ಟಿವಿ, ಆಟದ ಮತ್ತು ವ್ಯಾಯಾಮ ಸಲಕರಣಗಳು, ಬ್ಯಾಂಡ್ ಸೆಟ್, ಪುಸ್ತಕಗಳು, ಪಂಪ್ ಸೆಟ್ ಎಲ್ಲವೂ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಶಾಸಕರಿಗೆ ಮಾಹಿತಿ ನೀಡಲಾಯಿತು.

ಸಚಿವರ ಸಂಪರ್ಕ:

ತಕ್ಷಣ ಶಾಸಕ ಸೈಲ್ ದೂರವಾಣಿ ಮೂಲಕ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಅವರನ್ನು ಸಂಪರ್ಕಿಸಿ ಶಾಲೆಗೆ ಆಗಿರುವ ಹಾನಿಯನ್ನು ಅವರ ಗಮನಕ್ಕೆ ತಂದರಲ್ಲದೇ ತಕ್ಷಣ ಕೊಠಡಿ ಮಂಜೂರಾತಿಗೆ ಮನವಿ ಮಾಡಿದರು.

ಇದನ್ನೂ ಓದಿ:

ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಕಳಿಸಿ ವರದಿ ತರಿಸಿ ಮಂಜೂರಾತಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ಎಸ್.ಡಿ.ಎಂ.ಸಿ ಅಧ್ಯಕ್ಷ ಅಶೋಕ ನಾಯ್ಕ, ರಾಮಕೃಷ್ಣ ನಾಯ್ಕ, ರಾಜೇಶ ಎಂ ನಾಯ್ಕ, ಉಲ್ಲಾಸ ನಾಯ್ಕ, ಜಯಂತ ನಾಯ್ಕ, ಮಾಣಿ ನಾಯ್ಕ, ಗೌರೀಶ ನಾಯ್ಕ, ಮುಖ್ಯಾಧ್ಯಾಪಕರು, ಶಿಕ್ಷಕರು, ಸಾರ್ವಜನಿಕರು ಇದ್ದರು.

Must Read