October 22, 2026
Thursday, October 22, 2026
spot_img

ಮಳಗಿ ಧರ್ಮಾ ಜಲಾಶಯದಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಮೊಸಳೆ; ಪ್ರವಾಸಿಗರು, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಹೊಸದಿಗಂತ ವರದಿ ಮುಂಡಗೋಡ:

ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿರುವುದು ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

 ಧರ್ಮಾ ಜಲಾಶಯಕ್ಕೆ ಪ್ರವಾಸಕ್ಕೆ ಬಂದಿದ್ದ ಕೆಲವರು ಜಲಾಶಯದ ನೀರಿನಲ್ಲಿ ಬೃಹತ್ ಮೊಸಳೆ ಕಾಣಿಸಿಕೊಂಡಿದ್ದನು ನೋಡಿ ಅದರ ಪೋಟೋ ತೆಗೆದು ಸ್ಟೇಟ್ಸ್, ಹಾಗೂ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ. ಇನ್ನು ಕೆಲವರು ಪ್ರತ್ಯಕ್ಷವಾಗಿ ನೀರಿನಲ್ಲಿ ಮೊಸಳೆ ನೋಡಿರುವುದಾಗಿ ತಿಳಿಸಿದ್ದಾರೆ.

ಮೊಸಳೆ ಕಾಣಿಸಿಕೊಂಡಿರುವ ಮಾಹಿತಿ ಸ್ಥಳೀಯರಲ್ಲಿ ಹರಡುತ್ತಿದ್ದಂತೆ ಜಲಾಶಯದ ಬಳಿ ತೆರಳುವ ಜನರು ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಧರ್ಮಾ ಜಲಾಶಯಕ್ಕೆ ಪ್ರತಿದಿನ ಸುತ್ತಮುತ್ತಲಿನ ಗ್ರಾಮಗಳಿಂದ ಮಾತ್ರವಲ್ಲದೆ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಜಲಾಶಯದ ನೀರು ಹಾಗೂ ಸುತ್ತಲಿನ ಪ್ರದೇಶದಲ್ಲಿ ಜನರು ಓಡಾಡುವ ಹಿನ್ನೆಲೆಯಲ್ಲಿ ಮೊಸಳೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಜಲಾಶಯದ ಬಳಿ ದನ-ಕರುಗಳನ್ನು ಮೇಯಿಸಲು ಬಿಡುವವರು ಹಾಗೂ ವಿವಿಧ ಕೆಲಸಗಳಿಗಾಗಿ ನೀರಿನ ಸಮೀಪಕ್ಕೆ ತೆರಳುವವರು ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ. ವಿಶೇಷವಾಗಿ ಮಕ್ಕಳು ಜಲಾಶಯದ ಸಮೀಪ ತೆರಳದಂತೆ ಪಾಲಕರು ಎಚ್ಚರಿಕೆ ವಹಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:

ಜಲಾಶಯದ ನೀರಿನ ಬಳಿ ದನ-ಕರುಗಳನ್ನು ಬಿಡಬಾರದು. ಬಟ್ಟೆ ಒಗೆಯಲು, ಈಜಲು ಹಾಗೂ ಮೀನು ಹಿಡಿಯಲು ನೀರಿಗಿಳಿಯದಂತೆ ಎಚ್ಚರದಿಂದ ಇರಬೇಕು.

 ಮೊಸಳೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂಬ ಮಾತು ಕೇಳಿಬಂದಿದೆ. ಜಲಾಶಯದ ಸುತ್ತಮುತ್ತ ಮೊಸಳೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೊಸಳೆಯ ಚಲನವಲನದ ಬಗ್ಗೆ ಮಾಹಿತಿ ಪಡೆದು ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

Must Read