ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಅನುದಾನದ ಕೊರತೆ ಮತ್ತು ಗಗನಕ್ಕೇರುತ್ತಿರುವ ಜೀವನ ವೆಚ್ಚವನ್ನು ಖಂಡಿಸಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಸರ್ಕಾರದ ವಿರುದ್ಧ ಶನಿವಾರ ಇಡೀ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ. ದೇಶದ ವಿವಿಧ ನಗರಗಳಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದು, ರಾಜಧಾನಿ ಪ್ಯಾರಿಸ್ ಸೇರಿದಂತೆ ಹಲವೆಡೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭೀಕರ ಘರ್ಷಣೆ ನಡೆದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಹಿಂಸಾಚಾರದ ಹಿನ್ನೆಲೆಯಲ್ಲಿ ಪೊಲೀಸರು ದೇಶಾದ್ಯಂತ ಸುಮಾರು 1,000 ಜನರನ್ನು ಬಂಧಿಸಿದ್ದಾರೆ.
ರಣರಂಗವಾದ ರಾಜಧಾನಿ ಪ್ಯಾರಿಸ್
ಪ್ಯಾರಿಸ್‌ನಲ್ಲಿ ಆರಂಭದಲ್ಲಿ ಶಾಂತಿಯುತವಾಗಿಯೇ ಆರಂಭವಾದ ಮೆರವಣಿಗೆಯು ಪೂರ್ವ ಪ್ಯಾರಿಸ್‌ನ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ ಹಿಂಸಾಚಾರಕ್ಕೆ ತಿರುಗಿತು. ಮುಖಮೂಡಿ ಧರಿಸಿದ ನೂರಾರು ಯುವಕರು ಪೊಲೀಸರ ಮೇಲೆ ಕಲ್ಲು, ಬಾಟಲಿ ಹಾಗೂ ಪಟಾಕಿಗಳನ್ನು ಎಸೆದು ಆಕ್ರೋಶ ಹೊರಹಾಕಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಅಶ್ರುವಾಯು, ಭಾರಿ ಶಬ್ದದ ಗ್ರೆನೇಡ್‌ಗಳು ಹಾಗೂ ಜಲಫಿರಂಗಿಗಳನ್ನು ಪ್ರಯೋಗಿಸಿದರು. ಇದರಿಂದ ಗಾಬರಿಗೊಂಡ ಜನ ಚೆಲ್ಲಾಪಿಲ್ಲಿಯಾಗಿ ಓಡಿದರು.
ಮ್ಯಾಕ್ರಾನ್ ಭವಿಷ್ಯಕ್ಕೆ ಅಗ್ನಿಪರೀಕ್ಷೆ
ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗ ಮ್ಯಾಕ್ರಾನ್ ಅವರಿಗೆ ಈ ಜನಾಕ್ರೋಶ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಮತ್ತು ಮೂಲಸೌಕರ್ಯಕ್ಕೆ ಅನುದಾನ ನೀಡಬೇಕೆಂದು ತಿಂಗಳ ಹಿಂದೆ ಹೈಸ್ಕೂಲ್ ವಿದ್ಯಾರ್ಥಿಗಳು ಆರಂಭಿಸಿದ್ದ ಪ್ರತಿಭಟನೆ, ಈಗ ಇಂಧನ ಮತ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಸಾಮಾನ್ಯ ಜನ ಹಾಗೂ ಕಾರ್ಮಿಕ ಸಂಘಟನೆಗಳ ಹೋರಾಟವಾಗಿ ಮಾರ್ಪಟ್ಟು ದೇಶಾದ್ಯಂತ ವ್ಯಾಪಿಸಿದೆ. ಫ್ರಾನ್ಸ್‌ನಲ್ಲಿ ಪ್ರಸ್ತುತ ಹಣದುಬ್ಬರ ಶೇ. 3.1 ಕ್ಕೆ ಏರಿದ್ದು, ಇಂಧನ ಬೆಲೆ ಶೇ. 21 ಕ್ಕಿಂತ ಹೆಚ್ಚಾಗಿದೆ.
ದೇಶದ 289 ಕಡೆ ಪ್ರತಿಭಟನೆ, ನಡುಗಿದ ಪ್ರಮುಖ ನಗರಗಳು
ಸರ್ಕಾರದ ಮಾಹಿತಿ ಪ್ರಕಾರ ದೇಶಾದ್ಯಂತ ಒಟ್ಟು 289 ಕಡೆಗಳಲ್ಲಿ ರ‍್ಯಾಲಿಗಳು ನಡೆದಿವೆ. ಮಾರ್ಸಿಲ್ಲೆ ಮತ್ತು ಲಿಯಾನ್ ನಗರಗಳ ರಸ್ತೆಗಳಲ್ಲಿ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಿಯಾನ್, ಸ್ಟ್ರಾಸ್‌ಬರ್ಗ್, ಬೋರ್ಡೆಕ್ಸ್ ಮತ್ತು ನೈಸ್ ನಗರಗಳಲ್ಲಿಯೂ ಪೊಲೀಸರು ಕಣ್ಣೀರು ಅನಿಲ ಪ್ರಯೋಗಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರವು ಹೆಲಿಕಾಪ್ಟರ್‌ಗಳು ಮತ್ತು ಯುದ್ಧ ವಾಹನಗಳ ಸಜ್ಜುಗೊಳಿಸುವಿಕೆಯೊಂದಿಗೆ 70,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿತ್ತು.
ವಿದ್ಯಾರ್ಥಿ ಸಂಘಟನೆಗಳ ಬೇಡಿಕೆಗಳೇನು
ಉನ್ನತ ಶಿಕ್ಷಣದಲ್ಲಿ 2.5 ಲಕ್ಷ ಹೆಚ್ಚುವರಿ ಸೀಟುಗಳ ವ್ಯವಸ್ಥೆ ಮಾಡಬೇಕು.
ಶಾಲೆ ಮತ್ತು ವಿಶ್ವವಿದ್ಯಾಲಯಗಳ ದುರಸ್ತಿ ಕಾರ್ಯಕ್ಕೆ ತಕ್ಷಣ ಹಣ ಬಿಡುಗಡೆ ಮಾಡಬೇಕು ಹಾಗೂ ಹೆಚ್ಚಿನ ಶಿಕ್ಷಕರನ್ನು ನೇಮಿಸಬೇಕು.
ದಿನನಿತ್ಯದ ವೆಚ್ಚ ನಿಭಾಯಿಸಲು ವಿದ್ಯಾರ್ಥಿಗಳಿಗೆ ಮಾಸಿಕ 200 ಯುರೋ (ಸುಮಾರು 18,000) ಹೆಚ್ಚುವರಿ ಭತ್ಯೆ ನೀಡಬೇಕು ಮತ್ತು ಸರ್ಕಾರಿ ವಿದ್ಯಾರ್ಥಿ ನಿಲಯಗಳ ಬಾಡಿಗೆಯನ್ನು ಸದ್ಯಕ್ಕೆ ಹೆಚ್ಚಿಸಬಾರದು.
ಇದನ್ನೂ ಓದಿ:
ಪ್ರತಿಭಟನೆಯ ತೀವ್ರತೆಗೆ ಪ್ಯಾರಿಸ್‌ನ ಪ್ರಸಿದ್ಧ ಲೂವ್ರ್ ಮ್ಯೂಸಿಯಂ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ಮುಚ್ಚಲಾಗಿತ್ತು. ಹೌಸ್ ಆಫ್ ಆರ್ಟ್ ಫೇರ್ ಕೂಡ ತನ್ನ ವಾರಾಂತ್ಯದ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಅಧ್ಯಕ್ಷ ಮ್ಯಾಕ್ರಾನ್ ಶುಕ್ರವಾರ ಸಭೆ ನಡೆಸಿದ್ದರೂ, ಸರ್ಕಾರದಿಂದ ಸ್ಪಷ್ಟ ಘೋಷಣೆ ಹೊರಬೀಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.



