October 25, 2026
Sunday, October 25, 2026
spot_img

ನಮೋ ಘಾಟ್‌ನಲ್ಲಿ ವಾಯುಪಡೆಯ ಶಕ್ತಿ ಪ್ರದರ್ಶನ: ಇಂದು ವಾರಾಣಸಿ ಪ್ರಧಾನಿ ಮೋದಿ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ವಾಯುಪಡೆಯ (IAF) 94ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ವಾರಾಣಸಿಯಲ್ಲಿ ಆಯೋಜಿಸಲಾಗಿರುವ ಬೃಹತ್ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಪ್ರಧಾನಿ ಭೇಟಿಗೂ ಮುನ್ನವೇ ವಾರಾಣಸಿಯ ಗಂಗಾನದಿಯ ಆಕಾಶದಲ್ಲಿ ವಾಯುಪಡೆಯ ಸೂರ್ಯ ಕಿರಣ್ ಯುದ್ಧ ವಿಮಾನಗಳು ರಂಗುರಂಗಿನ ಚಿತ್ತಾರ ಮೂಡಿಸುವ ಮೂಲಕ ತಾಲೀಮು ನಡೆಸಿ ಗಮನ ಸೆಳೆದಿವೆ.

‘ವಿಂಗ್ಸ್ ಓವರ್ ಗಂಗಾಸ್’ ವೈಮಾನಿಕ ಪ್ರದರ್ಶನ

ವಾರಾಣಸಿಯ ಪ್ರಸಿದ್ಧ ‘ನಮೋ ಘಾಟ್’ನಲ್ಲಿ ಈ ಬಾರಿಯ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದು, ಇದಕ್ಕೆ ‘ವಿಂಗ್ಸ್ ಓವರ್ ಗಂಗಾಸ್’ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ವಾಯುಪಡೆಯ ಹೆಮ್ಮೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ಮತ್ತು ಸಾರಂಗ್ ಹೆಲಿಕಾಪ್ಟರ್ ತಂಡಗಳು ಆಕಾಶದಲ್ಲಿ ಸಾಹಸ ಪ್ರದರ್ಶನಗಳನ್ನು ನೀಡಲಿವೆ.

ಶಕ್ತಿ ಪ್ರದರ್ಶಿಸಲಿವೆ ಅತ್ಯಾಧುನಿಕ ಯುದ್ಧ ವಿಮಾನಗಳು

ದೇಶೀಯ ನಿರ್ಮಿತ ತೇಜಸ್ ಯುದ್ಧ ವಿಮಾನ, ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್ (LCH), ಐಎಲ್-76, ಐಎಲ್-78, ಸಿ-295 ಮತ್ತು ಎಎನ್-32 ಸಾರಿಗೆ ವಿಮಾನಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿವೆ. ಇವುಗಳೊಂದಿಗೆ ಮುಂಚೂಣಿ ಯುದ್ಧ ವಿಮಾನಗಳಾದ ಸುಖೋಯ್-30 MKI ಮತ್ತು ರಫೇಲ್ ವಿಮಾನಗಳು ಕಾಶಿಯ ಆಕಾಶದಲ್ಲಿ ಗರ್ಜಿಸಲಿವೆ. ಈ ಬಾರಿ ಭಾರತೀಯ ಭೂಸೇನೆ ಮತ್ತು ನೌಕಾಸೇನೆಯ ವಿಮಾನಗಳೂ ಪಾಲ್ಗೊಳ್ಳುತ್ತಿರುವುದು ವಿಶೇಷ.

ಪ್ರಧಾನಿಗೆ ಅದ್ಧೂರಿ ಸ್ವಾಗತ

ತಮ್ಮದೇ ಸಂಸದೀಯ ಕ್ಷೇತ್ರವಾಗಿರುವ ವಾರಾಣಸಿಗೆ ಬರುತ್ತಿರುವ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಇಡೀ ಕಾಶಿ ನಗರವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಪ್ರಧಾನಿ ಅವರ ರೋಡ್ ಶೋ ಸಾಗುವ ಪೊಲೀಸ್ ಲೈನ್ಸ್‌ನಿಂದ ಹಿಡಿದು ನಮೋ ಘಾಟ್‌ವರೆಗಿನ ಪ್ರಮುಖ 8 ಸ್ಥಳಗಳಲ್ಲಿ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:

ಕಾಶಿ ನಗರದ ಯುವ ಪೀಳಿಗೆಯು ಪ್ರಧಾನಿ ಮೇಲೆ ಗುಲಾಬಿ ದಳಗಳ ಮಳೆಗರೆಯಲು ಕಾತುರದಿಂದ ಕಾಯುತ್ತಿದೆ. ಶಂಖನಾದ, ಡಮರುಗ ವಾದನ, ಚಂಡೆ ಮದ್ದಳೆಗಳ ಸದ್ದು ಹಾಗೂ ಹೂವಿನ ಮಳೆಯೊಂದಿಗೆ ಪ್ರಧಾನಿ ಮೋದಿಯವರನ್ನು ತಾಯಂದಿರು ಮೊದಲಿಗೆ ಆರತಿ ಬೆಳಗಿ ಸ್ವಾಗತಿಸಲಿದ್ದಾರೆ. ಇದೇ ಭೇಟಿಯ ವೇಳೆ ಪ್ರಧಾನಿಯವರು ವಾರಾಣಸಿಯಲ್ಲಿ ಹೊಸ ಸಿದ್ಧ ಉಡುಪು ತಯಾರಿಕಾ ಘಟಕವನ್ನೂ ಉದ್ಘಾಟಿಸಲಿದ್ದಾರೆ.

Must Read

Skip to toolbar