ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಮಲೆನಾಡು ಭಾಗಗಳಲ್ಲಿ ಇಂದು ಸಂಭ್ರಮದಿಂದ ಭೂಮಿ ಹುಣ್ಣಿಮೆಯನ್ನು ಆಚರಿಸಲಾಗುತ್ತಿದೆ. ಅಶ್ವಯುಜ ಮಾಸದ ಹುಣ್ಣಿಮೆಯ ದಿನದಂದು ಭೂಮಿ ಹುಣ್ಣಿಮೆ ಅಥವಾ ಸೀಗೆ ಹುಣ್ಣಿಗೆ ಎಂದು ಕರೆಯುವ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರನೆ ಮಾಡಲಾಗುತ್ತದೆ.
ಈ ಸಮಯದಲ್ಲಿ ಬೆಳೆಗಳು ತೆನೆ ಬಿಟ್ಟು ಗರ್ಭಕಟ್ಟುವ ಸಮಯವಾಗಿದ್ದು, ಗರ್ಭಿಣಿಯರಿಗೆ ಸೀಮಂತ ಮಾಡುವಂತೆ ಭೂಮಿ ತಾಯಿಗೂ ಸೀಮಂತ ಮಾಡಿ ತಮ್ಮ ಬೆಳೆಯನ್ನು ರಕ್ಷಿಸುವಂತೆ ಬೇಡಿಕೊಳ್ಳಲಾಗುತ್ತದೆ. ವಿಜಯದಶಮಿ ಮುಗಿದ ಸರಿಯಾಗಿ ಐದು ದಿನಗಳ ನಂತರ ಭೂಮಿ ಹುಣ್ಣಿಮೆ ಆಗಮಿಸುತ್ತದೆ.
ಈ ಹಬ್ಬದ ಸಂದರ್ಭದಲ್ಲಿ ಮನೆಮಂದಿಯೆಲ್ಲಾ ಹೊಸಬಟ್ಟೆ ತೊಟ್ಟು ತೋಟಕ್ಕೆ ಹೋಗುತ್ತಾರೆ. ಅಲ್ಲಿ ಭೂಮಿತಾಯಿಗೆ ಸೀರೆ ಉಡಿಸಿ, ಪೂಜೆ ಮಾಡಿ, ವಿಶೇಷ ನೈವೇದ್ಯ ಮಾಡಲಾಗುತ್ತದೆ. ಅದಾದ ನಂತರ ಕುಟುಂಬದವರೆಲ್ಲರೂ ಸೇರಿ ತೋಟದಲ್ಲಿಯೇ ಕುಳಿತು ಊಟ ಮಾಡುತ್ತಾರೆ. ಬುಟ್ಟಿಯಲ್ಲಿ ಮನೆಯಿಂದ ತಂದ ಊಟವನ್ನು ಇಡೀ ಕುಟುಂಬದವರು ಹಂಚಿಕೊಂಡು ತಿನ್ನುತ್ತಾರೆ. ಅದಕ್ಕೂ ಮುನ್ನ ಭೂಮಿತಾಯಿಗೆ ಎಡೆಯನ್ನು ನೀಡಲಾಗುತ್ತದೆ.
ರೈತರಿಗೆ ಭೂಮಿ ಎಂದರೆ ಬರೀ ಭೂಮಿಯಲ್ಲ. ಜೀವ, ಜೀವನ ಕೊಟ್ಟ ದೇವತೆ. ಭೂಮಿಯು ಸಂತುಷ್ಟಿಯಿಂದಿರಲಿ, ನಮ್ಮ ಹೊಟ್ಟೆಯನ್ನೂ ತಣ್ಣಗಿಟ್ಟಿರಲಿ ಎಂದು ಬೇಡಿಕೊಂಡು, ವರ್ಷವಿಡೀ ಉತ್ತಮ ಫಸಲು ನೀಡುವ ಭೂಮಿ ತಾಯಿಗೆ ಗೌರವ ಸೂಚಿಸುತ್ತಾರೆ. ಬೇರೆ ಬೇರೆ ಊರುಗಳಲ್ಲಿ ವಾಸವಿರುವ ಮಕ್ಕಳು, ನೆಂಟರು ಎಲ್ಲರೂ ಊರಿಗೆ ಆಗಮಿಸಿ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಈ ದಿನ ಭೂಮಿಯನ್ನು ಅಗೆಯುವ ಯಾವುದೇ ಕಾರ್ಯವನ್ನು ಮಾಡುವುದಿಲ್ಲ.



