October 26, 2026
Monday, October 26, 2026
spot_img

‘ರಾಮಾಯಣ’ ಬರೀ ಚಿತ್ರವಲ್ಲ, ಜವಾಬ್ದಾರಿ: ಶ್ರೀರಾಮನ ಪಾತ್ರದ ಬಗ್ಗೆ ರಣ್‌ಬೀರ್ ಓಪನ್ ಟಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ತಾರಾಗಣವಾದ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರವಿ ದುಬೆ ಅವರು ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಕ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಶ್ರೀರಾಮ, ಸೀತಾ ಮಾತೆ ಮತ್ತು ಲಕ್ಷ್ಮಣನ ಪಾತ್ರಗಳಿಗೆ ಆಫರ್ ಬಂದಾಗ ನಿಮ್ಮ ಮೊದಲ ಪ್ರತಿಕ್ರಿಯೆ ಏನಾಗಿತ್ತು ಎಂದು ಪ್ರಶ್ನಿಸಿದರು. ಇದಕ್ಕೆ ರಣ್‌ಬೀರ್ ನೀಡಿದ ಉತ್ತರ ಇದೀಗ ಎಲ್ಲರ ಗಮನ ಸೆಳೆದಿದೆ.

ಈ ಕುರಿತು ಬಿಡುಗಡೆಯಾಗಿರುವ ಹೊಸ ಪ್ರೋಮೋದಲ್ಲಿ ಮಾತನಾಡಿರುವ ರಣ್‌ಬೀರ್, “ಈ ಪಾತ್ರ ನನಗೆ ಸಿಕ್ಕಾಗ ಇದು ಕೇವಲ ಒಂದು ನಟನೆಯಲ್ಲ, ದೊಡ್ಡ ಜವಾಬ್ದಾರಿ ಎಂಬುದು ತಿಳಿಯಿತು. ಆರಂಭದಲ್ಲಿ ನನಗೆ ತುಂಬ ಭಯವಾಯಿತು. ಶ್ರೀರಾಮನ ಪಾತ್ರ ಮಾಡಲು ನಾನು ಅರ್ಹನೇ? ಇದನ್ನು ಸರಿಯಾಗಿ ನಿರ್ವಹಿಸಲು ನನ್ನಿಂದ ಸಾಧ್ಯವೇ? ಎಂಬ ಪ್ರಶ್ನೆಗಳು ಕಾಡಿದವು. ಏಕೆಂದರೆ ಕೋಟ್ಯಂತರ ಜನರ ನಂಬಿಕೆ ಮತ್ತು ಭಾವನೆ ಶ್ರೀರಾಮನ ಜೊತೆ ಬೆಸೆದುಕೊಂಡಿದೆ. ಆದರೆ, ಕೆಲವೇ ದಿನಗಳಲ್ಲಿ ಆ ಭಯ ಕೃತಜ್ಞತೆಯಾಗಿ ಬದಲಾಯಿತು” ಎಂದು ಹೇಳಿದ್ದಾರೆ.

https://www.instagram.com/reel/De7D3_uhpYM/?utm_source=ig_web_button_share_sheet

ತಮ್ಮ ಜೀವನದ ವಿಶೇಷ ಘಟ್ಟದಲ್ಲಿ ಈ ಆಫರ್ ಬಂದಿದ್ದನ್ನು ನೆನೆದ ರಣ್‌ಬೀರ್, “ನಾನು ತಂದೆಯಾದ ಸಮಯದಲ್ಲೇ ಈ ಪಾತ್ರ ನನ್ನನ್ನು ಹುಡುಕಿ ಬಂತು. ಇದನ್ನು ದೇವರು ನನಗೆ ನೀಡಿದ ಅಪರೂಪದ ಕೊಡುಗೆ ಎಂದೇ ಭಾವಿಸುತ್ತೇನೆ. ಈ ಸಿನಿಮಾದಿಂದಾಗಿ ಉತ್ತಮ ಮಾನವನಾಗಲು, ರಾಮಾಯಣವನ್ನು ಮತ್ತಷ್ಟು ಆಳವಾಗಿ ಅರ್ಥೈಸಿಕೊಳ್ಳಲು ಹಾಗೂ ಈ ಅದ್ಭುತ ಕಲಾವಿದರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಶ್ರೀರಾಮನಂತೆ ಸಂಪೂರ್ಣವಾಗಿ ಬಾಳುವುದು ಅಸಾಧ್ಯವಿರಬಹುದು, ಆದರೆ ಅವರ ಜೀವನದಿಂದ ಒಂದಿಷ್ಟನ್ನಾದರೂ ಕಲಿಯುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ” ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ, ಬಿಡುಗಡೆಯಾದ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ರಣ್‌ಬೀರ್ ಅವರ ವಿನಮ್ರ ನಡೆ ಮತ್ತು ಭಕ್ತಿಯುಕ್ತ ಮಾತುಗಳು ಪ್ರೇಕ್ಷಕರ ಮನ ಗೆದ್ದಿವೆ.

Must Read

Skip to toolbar