October 26, 2026
Monday, October 26, 2026
spot_img

ಹೆತ್ತೂರಿನಲ್ಲಿ ಆಂಬುಲೆನ್ಸ್ ಅವ್ಯವಸ್ಥೆ: ತಾಯಿ–ಮಗು ಸಾ*ವು, ಎರಡು ವಾಹನಗಳಿಗೆ ಗ್ರಾಮಸ್ಥರ ಆಗ್ರಹ

ಹೊಸದಿಗಂತ ವರದಿ ಸಕಲೇಶಪುರ:

ತುರ್ತು ಸಂದರ್ಭದಲ್ಲಿ ಸಕಾಲಕ್ಕೆ ಆಂಬುಲೆನ್ಸ್ ಸಿಗದಿರುವ ಸಮಸ್ಯೆ ಗ್ರಾಮೀಣ ಆರೋಗ್ಯ ಸೇವೆಗಳ ಕುರಿತು ಮತ್ತೆ ಆತಂಕ ಮೂಡಿಸಿದೆ. ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಎ ಬ್ಲಾಕ್‌ನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆ ಹಾಗೂ ಅವರ ಗರ್ಭದಲ್ಲಿದ್ದ ಮಗು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಈ ಹಿನ್ನೆಲೆಯಲ್ಲಿ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕೆಂಬ ಒತ್ತಾಯ ಗ್ರಾಮಸ್ಥರಿಂದ ಕೇಳಿಬಂದಿದೆ.

ಎ ಬ್ಲಾಕ್ ನಿವಾಸಿ ಅಂಬಿಕಾ ಅವರಿಗೆ ಶನಿವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 7.30ಕ್ಕೆ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಮಗುವಿನ ಗಾತ್ರ ಹೆಚ್ಚಿರುವುದರಿಂದ ಸ್ಥಳೀಯ ಕೇಂದ್ರದಲ್ಲಿ ಹೆರಿಗೆ ಮಾಡಿಸುವುದು ಸೂಕ್ತವಲ್ಲ ಎಂದು ಈ ಹಿಂದೆ ವೈದ್ಯರು ಕುಟುಂಬಕ್ಕೆ ತಿಳಿಸಿದ್ದರು ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸಕಲೇಶಪುರಕ್ಕೆ ಕರೆದೊಯ್ಯಲು ಆರೋಗ್ಯ ಕೇಂದ್ರದ ಸಿಬ್ಬಂದಿ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಕರೆ ಮಾಡಿದ್ದರೂ, ವಾಹನ ಸಕಾಲದಲ್ಲಿ ಲಭ್ಯವಾಗಲಿಲ್ಲ ಎಂಬುದು ಕುಟುಂಬದ ಆರೋಪವಾಗಿದೆ.

ಕೊನೆಗೆ ಬೆಳಿಗ್ಗೆ 10.30ರ ಸುಮಾರಿಗೆ ಖಾಸಗಿ ಆಂಬುಲೆನ್ಸ್ ಮೂಲಕ ಅಂಬಿಕಾ ಅವರನ್ನು ಸಕಲೇಶಪುರಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ಹಾಸನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ವೈದ್ಯರು ಸಿಜೇರಿಯನ್ ಅಗತ್ಯವಿದೆ ಎಂದು ತಿಳಿಸಿದ ಸಂದರ್ಭದಲ್ಲಿ ಗರ್ಭದಲ್ಲಿದ್ದ ಮಗು ಮೃತಪಟ್ಟಿರುವುದಾಗಿ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಬಳಿಕ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಗಿದ್ದು, ಅಲ್ಲಿಗೆ ತೆರಳುವ ಮಾರ್ಗಮಧ್ಯೆ ಅಂಬಿಕಾ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪದೇಪದೇ ಕೆಟ್ಟು ನಿಲ್ಲುವ ಆಂಬುಲೆನ್ಸ್

ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಆಂಬುಲೆನ್ಸ್ ಪದೇಪದೇ ಕೆಟ್ಟು ನಿಲ್ಲುವುದರಿಂದ ತುರ್ತು ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೆರಿಗೆ, ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ವಿಳಂಬವು ರೋಗಿಗಳ ಸಂಕಷ್ಟವನ್ನು ಹೆಚ್ಚಿಸಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ಇದನ್ನೂ ಓದಿ:

ಎರಡು ಆಂಬುಲೆನ್ಸ್‌ಗಳಿಗೆ ಕರವೇ ಒತ್ತಾಯ

ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಆಂಬುಲೆನ್ಸ್ ಒದಗಿಸುವುದರ ಜತೆಗೆ, ಪರ್ಯಾಯವಾಗಿ ಬಳಸಲು ಮತ್ತೊಂದು ವಾಹನದ ವ್ಯವಸ್ಥೆಯನ್ನೂ ಮಾಡಬೇಕು ಎಂದು ಕರವೇ ನಾರಾಯಣ ಗೌಡ ಬಣದ ತಾಲ್ಲೂಕು ಅಧ್ಯಕ್ಷ ಗಗನ್ ಗೌಡ ಆಗ್ರಹಿಸಿದ್ದಾರೆ. ಜಿಲ್ಲಾಡಳಿತ, ಸ್ಥಳೀಯ ಶಾಸಕರು ಹಾಗೂ ಆರೋಗ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Must Read