ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬ ದೇವಿಯ ದರ್ಶನೋತ್ಸವವು ಎರಡನೇ ದಿನವೂ ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ಮುಂದುವರಿದಿದ್ದು, ದೇವಸ್ಥಾನದ ಆವರಣ ಭಕ್ತಸಾಗರದಿಂದ ಕಿಕ್ಕಿರಿದು ತುಂಬಿಹೋಗಿದೆ. ಕೇವಲ ಹಗಲಷ್ಟೇ ಅಲ್ಲ, ದೇವಿಯ ದರ್ಶನಕ್ಕಾಗಿ ಸಾವಿರಾರು ಭಕ್ತರು ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಶನಿವಾರ ಬೆಳಿಗ್ಗೆ 6 ಗಂಟೆಯಿಂದಲೇ ದೇವಿಯ ಗರ್ಭಗುಡಿಯ ಬಾಗಿಲು ತೆರೆದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. 300 ರೂ. ಗೆ ವಿಶೇಷ ದರ್ಶನದ ಟಿಕೆಟ್ ಸಾಲಿನಲ್ಲಿಯೂ ಭಕ್ತರು ಸುದೀರ್ಘವಾಗಿ ಸಾಲುಗಟ್ಟಿ ನಿಂತಿದ್ದಾರೆ. ಆಶ್ಚರ್ಯಕರ ಎಂಬಂತೆ, ಒಂದು ಸಾವಿರ ರೂಪಾಯಿಯ ವಿಐಪಿ ವಿಶೇಷ ದರ್ಶನದ ಸಾಲಿನಲ್ಲಿ ಭಕ್ತರ ಸಂಖ್ಯೆ ತೀರಾ ವಿರಳವಾಗಿದ್ದು, ಆ ಸಾಲು ಸದ್ಯಕ್ಕೆ ಖಾಲಿ ಹೊಡೆಯುತ್ತಿದೆ.
ಭಕ್ತರ ನಿಯಂತ್ರಣ ಮತ್ತು ಸುರಕ್ಷತೆಗಾಗಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭನ್ವಿತಾ ಅವರು ಬೆಳ್ಳಂಬೆಳಿಗ್ಗೆಯೇ ದೇವಸ್ಥಾನಕ್ಕೆ ಧಾವಿಸಿದ್ದು, ಸ್ವತಃ ಗರ್ಭಗುಡಿಯ ಬಳಿಯೇ ನಿಂತು ಜನದಟ್ಟಣೆಯನ್ನು ನಿಯಂತ್ರಿಸುತ್ತಿದ್ದಾರೆ.
‘ಇದು ದೇವಿಯ ಪವಾಡ’-ಸಚಿವ ಶಿವಲಿಂಗೇಗೌಡ
ಹಾಸನಾಂಬೆ ಜಾತ್ರೆಯ ಇತಿಹಾಸದಲ್ಲೇ ಮೊದಲ ದಿನವೇ ಈ ಪ್ರಮಾಣದಲ್ಲಿ ಭಾರೀ ಜನಸಾಗರ ಹರಿದುಬಂದಿರುವುದು ಇದೇ ಮೊದಲು. ದೇವಸ್ಥಾನಕ್ಕೆ ಭೇಟಿ ನೀಡಿದ್ದ ಹಾಸನ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು, ಮೊದಲ ದಿನವೇ ಇಷ್ಟೊಂದು ಜನ ಬಂದಿರುವುದನ್ನು ನೋಡಿ, “ಇದು ಸಾಕ್ಷಾತ್ ದೇವಿಯ ಪವಾಡವೇ ಸರಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ:
ದೂರದ ಊರುಗಳಿಂದ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರತಿ ಸಾಲಿನಲ್ಲಿ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.



