October 31, 2026
Saturday, October 31, 2026
spot_img

ರೊಚ್ಚಿಗೆದ್ದ ಮಂಡ್ಯ ರೈತರು: ಸಿಎಂ ಡಿಕೆಶಿ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರೊಟೆಸ್ಟ್

ಹೊಸದಿಗಂತ ವರದಿ ಮಂಡ್ಯ:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಂಡ್ಯ ಭೇಟಿಗೂ ಮುನ್ನವೇ ಜಿಲ್ಲೆಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಲು ಸಜ್ಜಾಗಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಡ್ಯದ ಐತಿಹಾಸಿಕ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ್ದ ರೈತರು, ಸಿಎಂ ಡಿಕೆಶಿ ವಿರುದ್ಧ ಕಪ್ಪು ಪಟ್ಟಿ ಧರಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪ್ರಮುಖ ಬೇಡಿಕೆಗಳೇನು?

ಕಬ್ಬು ಬೆಳೆಗಾರರಿಗೆ ನ್ಯಾಯಯುತವಾದ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ರಾಜ್ಯದಲ್ಲಿ ಕಡುಬಡವರ ಮಕ್ಕಳ ಆಸರೆಯಾಗಿರುವ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಹಾಗೂ ರಾಜ್ಯಾದ್ಯಂತ ಎಲ್ಲರಿಗೂ ಸಮಾನ ಮತ್ತು ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಎಸ್‌ಪಿ ಮನವೊಲಿಕೆ ವಿಫಲ, ರೈತರು ಪೊಲೀಸ್ ವಶಕ್ಕೆ

ರೈತರು ಕಪ್ಪು ಬಾವುಟ ಹಿಡಿದು ಮುಖ್ಯಮಂತ್ರಿಗಳ ಹಾದಿಗೆ ಅಡ್ಡಿಪಡಿಸಲು ನಿರ್ಧರಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರು ಸ್ಥಳಕ್ಕೆ ಧಾವಿಸಿ ರೈತರ ಮನವೊಲಿಸಲು ಯತ್ನಿಸಿದರು. ಆದರೆ, ಅಧಿಕಾರಿಗಳ ಮನವಿಗೆ ಮಣಿಯದ ರೈತರು ತಮ್ಮ ಹೋರಾಟದಿಂದ ಹಿಂದೆ ಸರಿಯಲು ನಿರಾಕರಿಸಿದರು.

ಇದನ್ನೂ ಓದಿ:

ಪೊಲೀಸರ ಮನವೊಲಿಕೆ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ. ಕಪ್ಪು ಬಾವುಟ ಹಿಡಿದು ಘೋಷಣೆ ಕೂಗುತ್ತಿದ್ದ ರೈತರನ್ನು ಪೊಲೀಸರು ಎಳೆದೊಯ್ದು ಬಸ್‌ನಲ್ಲಿ ತುಂಬಿ ಸ್ಥಳದಿಂದ ಕರೆದೊಯ್ದಿದ್ದಾರೆ. ಮುಖಂಡರ ಬಂಧನದ ಹೊರತಾಗಿಯೂ ಕಬ್ಬಿನ ನಾಡಿನಲ್ಲಿ ಸರ್ಕಾರದ ವಿರುದ್ಧ ರೈತರ ಆಕ್ರೋಶದ ಕಿಡಿ ಮುಂದುವರಿದಿದೆ.

Must Read

Skip to toolbar