ಹೊಸದಿಗಂತ ವರದಿ ಮಡಿಕೇರಿ:
ಯುವ ಜನರು ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ನಮ್ಮ ಶ್ರೀಮಂತ ಪರಂಪರೆಯ ನೈಜ ವಾರಸುದಾರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕೃಷಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಕರೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ಬರೀ ಭಾಷೆಯಲ್ಲ. ಅದು ನಮ್ಮ ಉಸಿರು. ಸೌಹಾರ್ದತೆ ಸಾರುವ ಕನ್ನಡ ನಾಡು, ಸ್ವಾಭಿಮಾನದ ಜೊತೆಗೆ ಸೋದರ ಭಾಷೆಗಳನ್ನು ಗೌರವಿಸುವ ವಿಶಾಲ ಭಾವನೆಯನ್ನೂ ಒಳಗೊಂಡಿದೆ. ಸಾಂಸ್ಕೃತಿಕ ಸಾಮರಸ್ಯದೊಂದಿಗೆ ಕರುನಾಡಿನ ಹಿರಿಮೆಯನ್ನು ಜಗದಗಲಕ್ಕೂ ಸಾರಿದೆ ಎಂದು ಅವರು ಹೇಳಿದರು.

ಕನ್ನಡ ಸಾರಸ್ವತ ಲೋಕಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ಕನ್ನಡ ಭಾಷೆಯ ಉತ್ಕೃಷ್ಟತೆ ಹಾಗೂ ಗರಿಮೆಗೆ ಸಾಕ್ಷಿಯಾಗಿದೆ. ಕನ್ನಡ ಸಾಹಿತ್ಯದ ಕಂಪು ಪಸರಿಸಿದ ಆದಿಕವಿ ಪಂಪರಿಂದ ಹಿಡಿದು, ರಾಷ್ಟ್ರಕವಿ ಕುವೆಂಪು, ದ.ರಾ ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಬಿ.ಎಂ. ಶ್ರೀಕಂಠಯ್ಯ ಅವರಂತಹ ಅನೇಕ ಪ್ರಸಿದ್ದ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದರು. ಇಂತಹ ಸದಭಿರುಚಿ, ಸಂಪ್ರದಾಯ, ಸಂಸ್ಕಾರವಿರುವಂತಹ ಪವಿತ್ರ ಕನ್ನಡ ನಾಡಿನಲ್ಲಿ ಜನಿಸಿದ ನಾವೆಲ್ಲರೂ ಧನ್ಯರು ಎಂದು ಸಚಿವರು ಹೇಳಿದ್ದಾರೆ.
ಪ್ರದೇಶಾವಾರು ವಿಭಿನ್ನ ಸಂಸ್ಕೃತಿ ನಮ್ಮಲ್ಲಿದ್ದರೂ ನಾಡು, ನುಡಿ ಹಾಗೂ ಜಲದ ವಿಚಾರ ಬಂದಾಗ ಏಕತೆ ಪ್ರದರ್ಶಿಸುವ ಗುಣ ಕನ್ನಡಿಗರಲ್ಲಿದೆ ಎಂದ ಅವರು, ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ನಿತ್ಯೋತ್ಸವ ಆಗಬೇಕು ಎಂಬ ಕವಿ ಗೋಪಾಲಕೃಷ್ಣ ಅಡಿಗರ ಆಶಯದಂತೆ ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ಎಂಬ ಸಾಲನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು ಎಂದರು.
ಕನ್ನಡ ಏಕೀಕರಣದಲ್ಲೂ ಕೊಡಗಿನವರ ಪಾತ್ರ ಹಾಗೂ ಕೊಡುಗೆ ಅತ್ಯಂತ ಪ್ರಮುಖವಾದುದು ಎಂದು ಸ್ಮರಿಸಿದ ಅವರು, ಕನ್ನಡ ಭಾಷಾ ಜಾಗೃತಿಯಲ್ಲೂ ಕೊಡಗಿನ ಅನೇಕ ನಾಯಕರು ಮುಂಚೂಣಿಯಲ್ಲಿ ನಿಂತು, ಕನ್ನಡ ನೆಲದ ಅಸ್ಮಿತೆಯನ್ನು ಎತ್ತಿಹಿಡಿದಿದ್ದಾರೆ ಎಂದು ನೆನಪಿಸಿದರು.
ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಚೈತನ್ಯ, ಬದುಕಿಗೆ ನೆಮ್ಮದಿ ಹಾಗೂ ಭದ್ರತೆ ನೀಡಲು ಶ್ರಮಿಸಿದೆ ಎಂದ ಸಚಿವರು, ಭಾರತ, ವಿಶ್ವದಲ್ಲೇ ಹೆಚ್ಚು ಯುವಜನರನ್ನು ಹೊಂದಿರುವ ದೇಶವಾಗಿದ್ದು,ಇಂತಹ ಯುವಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡೇ ವೃತ್ತಿಪರ ಕೋರ್ಸ್’ಗಳ ಪ್ರವೇಶದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5 ರಷ್ಟು ಮೀಸಲಾತಿ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಯುವ ಜನರಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಲು ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ, ಸರ್ಕಾರಿ ಪ್ರಾಯೋಜಿತ ಎಐ ವಿಶ್ವವಿದ್ಯಾನಿಲಯ, 6ನೇ ತರಗತಿಯಿಂದಲೇ ಎಐ ಶಿಕ್ಷಣ, ಹೀಗೆ ಹಲವು ಮಹತ್ವ ಕಾರ್ಯಕ್ರಮಗಳನ್ನು ಅನುಷ್ಠನಗೊಳಿಸಲು ಸರಕಾರ ಮುಂದಾಗಿದೆ ಎಂದರು.
ರೈತರಿಗೆ ಉತ್ತೇಜನ:
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಆದ್ಯತೆ ನೀಡಿದೆ. ವಿವಿಧ ಇಲಾಖೆಗಳ ಮೂಲಕ ಮೂಲ ಸೌಲಭ್ಯ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಇಂದು ಭೀಕರ ಬರ ಎದುರಾಗಿರುವ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ರೈತರಿಗೆ ಕೃಷಿ ಯಂತ್ರೋಪಕರಣಗಳ ಸೌಲಭ್ಯ ಒದಗಿಸಲು ‘ನೇಗಿಲ ಯೋಗಿ’ ಯೋಜನೆ ಜಾರಿಗೆ ತರಲು ಸಿದ್ಧವಾಗಿದೆ. 3 ಎಕರೆ ಒಳಗೆ ಭೂಮಿ ಹೊಂದಿರುವ ರೈತರಿಗೆ ಜಮೀನು ಉಳುಮೆ ಸೇರಿ ಇತರೆ ಚಟುವಟಿಕೆಗಳಿಗೆ ಪ್ರೋತ್ಸಾಹಧನ ನೀಡಲಿದೆ. ರೈತರಿಗೆ ಉಪಗ್ರಹ ಆಧರಿತ ಬೆಳೆ ಮಾಹಿತಿ ನೀಡಲು ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ರೈತರಿಗೆ ಗುಣಮಟ್ಟದ ಬೀಜ ಹಾಗೂ ಕೀಟನಾಶಕ ವಿತರಣೆ ಆಗಬೇಕು. ನಕಲಿ ಬೀಜ ಹಾಗೂ ಕೀಟನಾಶಕ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ:
ಕೊಡಗು ಜಿಲ್ಲೆಯಲ್ಲಿ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, 50 ನರ್ಸಿಂಗ್ ಅಧಿಕಾರಿಗಳ ನೇಮಕಾತಿಗೆ ಅನುಮೋದನೆ ದೊರೆತಿದೆ. ಇದಲ್ಲದೆ, 300 ಹಾಸಿಗೆಗಳ ಸಾಮರ್ಥ್ಯದ ನೂತನ ಆಸ್ಪತ್ರೆಯ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದು ನರೇಂದ್ರಸ್ವಾಮಿ ಮಾಹಿತಿ ನೀಡಿದರು.
ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ ಪಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಜಿಲ್ಲಾಧಿಕಾರಿ ಸೋಮಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಇತರರು ಹಾಜರಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು.



