November 3, 2026
Tuesday, November 3, 2026
spot_img

ಕಬ್ಬಿನ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರ ಹೋರಾಟ ತೀವ್ರ: ಇಂದು ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ

ಹೊಸದಿಗಂತ ವರದಿ ಬೆಳಗಾವಿ:

ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಕಳೆದ ಹಲವು ದಿನಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ.

ಸೋಮವಾರ ಚುನ್ನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರುಜಿ ಅವರ ನೇತೃತ್ವದಲ್ಲಿ ಚಿಕ್ಕೋಡಿ ತಾಲೂಕಿನ ಗುರ್ಲಾಪುರದಿಂದ ಬೆಳಗಾವಿಯ ಹಿಂಡಲಗಾ ಜೈಲಿನವರೆಗೆ ಹಮ್ಮಿಕೊಂಡಿರುವ ಜೈಲ್‌ ಭರೋ ರ‍್ಯಾಲಿಯು ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಸಾಗಿ ಕಬ್ಬೂರಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದೆ.

ಇಂದು (ಮಂಗಳವಾರ) ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ರೈತ ಮುಖಂಡರ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವವರೆಗೆ ರೈತರು ಕಬ್ಬೂರಿನಲ್ಲಿಯೇ ಉಳಿಯಬೇಕು. ಯಾರೂ ಸ್ಥಳದಿಂದ ತೆರಳಬಾರದು ಎಂದು ರೈತ ಮುಖಂಡ ಮಲ್ಲಪ್ಪ ಚೌಗಲೆ ಕರೆ ನೀಡಿದ್ದಾರೆ.

ಸಭೆಯಲ್ಲಿ ಕಾರ್ಖಾನೆಗಳಿಂದ ಪ್ರತಿ ಟನ್ ಕಬ್ಬಿಗೆ 4,500 ರೂ. ದರ ಹಾಗೂ ಎಎಸ್ಪಿ ರೂಪದಲ್ಲಿ 1,000 ರೂ. ನೀಡಬೇಕು. ಎಂಎಸ್ಪಿ ದರ ನಿಗದಿಯಾಗುವವರೆಗೆ ಸಕ್ಕರೆ ಬೆಲೆ ನಿಗದಿಗೆ ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ:

ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Must Read

Skip to toolbar