ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಗುವಾಹಟಿಯ ಪ್ರಸಿದ್ಧ ಅಸ್ಸಾಂ ಇಂಜಿನಿಯರಿಂಗ್ ಕಾಲೇಜಿನ (AEC) ಹಾಸ್ಟೆಲ್ನಲ್ಲಿ ಬೇಜವಾಬ್ದಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಲೇಜಿನ 7ನೇ ನಂಬರ್ ಹಾಸ್ಟೆಲ್ನ ಮೇಲ್ಛಾವಣಿಯ ನೀರಿನ ಟ್ಯಾಂಕ್ನಲ್ಲಿ ಮಂಗನ ಕೊಳೆತ ಶವ ಪತ್ತೆಯಾಗಿದ್ದು, ಇದೇ ಕಲುಷಿತ ನೀರನ್ನು ಬಳಸಿದ ಬರೋಬ್ಬರಿ 54 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ವಿದ್ಯಾರ್ಥಿಗಳು ತೀವ್ರ ಹೊಟ್ಟೆನೋವು, ವಾಂತಿ ಮತ್ತು ಜ್ವರದಿಂದ ಬಳಲುತ್ತಿದ್ದು, ಅವರನ್ನು ಸರ್ಕಾರಿ ಆಯುರ್ವೇದ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಟ್ಯಾಂಕ್ ತೆರೆದಾಗ ಕಾದಿತ್ತು ಶಾಕ್
ದುರ್ಗಾಪೂಜೆ ರಜೆಯ ಮುಗಿಸಿ ವಿದ್ಯಾರ್ಥಿಗಳು ಹಾಸ್ಟೆಲ್ಗೆ ಮರಳಿದಾಗಿನಿಂದ ಈ ಸಮಸ್ಯೆ ಶುರುವಾಗಿದೆ. ಕುಡಿಯುವ ಮತ್ತು ಬಳಸುವ ನೀರು ತೀವ್ರವಾಗಿ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ ಮೇಲ್ವಿಚಾರಕರಿಗೆ ದೂರು ನೀಡಿದ್ದರು. ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಕಾಣಿಸಿಕೊಂಡಾಗ, ಅದು ಮೆಸ್ನ ಆಹಾರದ ಸಮಸ್ಯೆಯಿಂದ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು.
ಆದರೆ, ದಿನೇ ದಿನೇ ವಿದ್ಯಾರ್ಥಿಗಳು ಬೀಳುತ್ತಿದ್ದ ಅನಾರೋಗ್ಯವನ್ನು ಕಂಡು ಅನುಮಾನಗೊಂಡ ವಿದ್ಯಾರ್ಥಿಗಳ ಗುಂಪೊಂದು ಭಾನುವಾರ ಸ್ವತಃ ತಾವೇ ಮೇಲೆ ಹೋಗಿ ಟ್ಯಾಂಕ್ ಪರಿಶೀಲಿಸಿದೆ. ಈ ವೇಳೆ ಟ್ಯಾಂಕ್ ಒಳಗಡೆ ಮಂಗನ ಕೊಳೆತ ಹಾಗೂ ಕರಗಿದ ಸ್ಥಿತಿಯಲ್ಲಿದ್ದ ಕಳೇಬರ ಪತ್ತೆಯಾಗಿದೆ. ಇದೇ ನೀರನ್ನು ವಿದ್ಯಾರ್ಥಿಗಳು ಕುಡಿಯಲು, ಸ್ನಾನ ಮಾಡಲು ಬಳಸುತ್ತಿದ್ದರು ಎಂಬುದು ಆತಂಕ ಮೂಡಿಸಿದೆ.
ಪರೀಕ್ಷೆ ಮುಂದೂಡಿಕೆ; ಅಧಿಕಾರಿಗಳ ವಿರುದ್ಧ ಆಕ್ರೋಶ
ವಿದ್ಯಾರ್ಥಿ ಪ್ರತಿನಿಧಿ ಮೃತ್ಯುಂಜಯನ್ ಮಾತನಾಡಿ, “ನೀರು ವಾಸನೆ ಬರುತ್ತಿರುವ ಬಗ್ಗೆ ಮೊದಲೇ ದೂರು ನೀಡಿದ್ದರೂ ಹಾಸ್ಟೆಲ್ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿತ್ತು. ನನ್ನ ಸ್ನೇಹಿತರ ಸ್ಥಿತಿ ಗಂಭೀರವಾಗಿದ್ದು, ಸಲೈನ್ ಹಾಕಲಾಗಿದೆ. ಅವರಿಗೆ ಕನಿಷ್ಠ ನಡೆಯಲೂ ಆಗುತ್ತಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಸಿದ್ಧತೆಗೆ ಭಾರೀ ಹಿನ್ನಡೆಯಾಗಿದ್ದು, ಮುಂಬರುವ ಸಿಎಟಿ (CAT) ಪರೀಕ್ಷೆಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಕಾಲೇಜು ಪ್ರಾಂಶುಪಾಲರು, ಆಸ್ಪತ್ರೆಯ ಭಿನ್ನ ಹೇಳಿಕೆ
ಈ ಕುರಿತು ಕಾಲೇಜಿನ ಪ್ರಾಂಶುಪಾಲೆ ಡಾ. ಅಮೃತಾ ಗಂಗೂಲಿ ಮಾತನಾಡಿ, “ಪರಿಸ್ಥಿತಿ ಈಗ ಹತೋಟಿಯಲ್ಲಿದೆ. ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲಾಗಿದ್ದು, ವಿದ್ಯಾರ್ಥಿಗಳ ಮೆಸ್ ಅನ್ನು ಬೇರೆ ಹಾಸ್ಟೆಲ್ಗೆ ಶಿಫ್ಟ್ ಮಾಡಲಾಗಿದೆ. ಯಾರೂ ಆಸ್ಪತ್ರೆಗೆ ದಾಖಲಾಗುವ ಪ್ರಮೇಯ ಬಂದಿಲ್ಲ, ಎಲ್ಲರೂ ತರಗತಿಗಳಿಗೆ ಹಾಜರಾಗುತ್ತಿದ್ದಾರೆ” ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ.
ಆದರೆ, ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಣಬ್ ಜ್ಯೋತಿ ಬೈಶ್ಯ ಅವರು ಈ ಹೇಳಿಕೆಯನ್ನು ತಳ್ಳಿಹಾಕಿದ್ದು, “ಹಾಸ್ಟೆಲ್ನಿಂದ 54 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ತರಲಾಗಿತ್ತು. ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ರೆಫರ್ ಮಾಡಲಾಗಿದ್ದು, ಉಳಿದವರು ಚಿಕಿತ್ಸೆ ಪಡೆದು ಮರಳಿದ್ದಾರೆ. ಸದ್ಯಕ್ಕೆ ಎಲ್ಲರ ಸ್ಥಿತಿ ಸ್ಥಿರವಾಗಿದೆ” ಎಂದು ಖಚಿತಪಡಿಸಿದ್ದಾರೆ.
ಇದನ್ನೂ ಓದಿ:
ಕಾಲೇಜು ಕ್ಯಾಂಪಸ್ನಲ್ಲಿ ಮಂಗಗಳ ಅಟ್ಟಹಾಸ
ಈ ಘಟನೆಯು ಕಾಲೇಜು ಕ್ಯಾಂಪಸ್ನಲ್ಲಿ ಮಂಗಗಳ ಕಾಟದ ಗಂಭೀರ ಸಮಸ್ಯೆಯನ್ನು ಮುನ್ನೆಲೆಗೆ ತಂದಿದೆ. ಕಾಲೇಜಿನ ಹಿಂಭಾಗದಲ್ಲಿರುವ ಬೆಟ್ಟದಿಂದ ನಿತ್ಯ 300 ರಿಂದ 400 ಮಂಗಗಳ ಹಿಂಡು ಆಹಾರ ಹುಡುಕುತ್ತಾ ಹಾಸ್ಟೆಲ್ ಆವರಣಕ್ಕೆ ನುಗ್ಗುತ್ತವೆ. ಇತ್ತೀಚೆಗಷ್ಟೇ ಮಂಗ ಕಚ್ಚಿ ವಿದ್ಯಾರ್ಥಿಯೊಬ್ಬ ಆಂಟಿ-ರೇಬಿಸ್ ಚಿಕಿತ್ಸೆ ಪಡೆದಿದ್ದ ಹಳೆಯ ಘಟನೆಯನ್ನು ಪ್ರಾಂಶುಪಾಲರು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ 2-3 ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಅಸಹಾಯಕತೆ ವ್ಯಕ್ತಪಡಿಸಿದೆ.



