ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಪ್ರಮುಖ ನಗರವಾದ ಪುಣೆಯ ಸಾರಿಗೆ ಮೂಲಸೌಕರ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಒಂದು ದೂಡ್ಡ ಹೆಜ್ಜೆ ಇಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬರೋಬ್ಬರಿ 21,800 ಕೋಟಿ ರೂಪಾಯಿ ಮೌಲ್ಯದ ಪುಣೆ ಮೆಟ್ರೋ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ಈ ವರ್ಚುವಲ್ ಸಮಾರಂಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕೂಡ ಉಪಸ್ಥಿತರಿದ್ದರು.
ಈ ಮೆಗಾ ಯೋಜನೆಯು ಪುಣೆ ನಗರದ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ತಾಂತ್ರಿಕ ಆವಿಷ್ಕಾರಗಳೊಂದಿಗೆ ಆಧುನಿಕ ಸಾರಿಗೆ ಪರಿಹಾರವನ್ನು ಒದಗಿಸಲಿದೆ.
8,300 ಕೋಟಿ ರೂ. ವೆಚ್ಚದ ‘ಪಿಂಕ್ ಲೈನ್’ ಲೋಕಾರ್ಪಣೆ
ಸುಮಾರು 23 ಕಿಮೀ ಉದ್ದದ ‘ಪಿಂಕ್ ಲೈನ್’ ಅನ್ನು ಪ್ರಧಾನಿ ಮೋದಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದ್ದಾರೆ. ಈ ಮಾರ್ಗವು ಮಾನ್ ಪ್ರದೇಶದಿಂದ ಆರಂಭಗೊಂಡು ಹಿನೇಜವಾಡಿ ಐಟಿ ಹಬ್ ಹಾಗೂ ಶಿವಾಜಿನಗರವನ್ನು ನೇರವಾಗಿ ಜೋಡಿಸುತ್ತದೆ. ಪುಣೆಯ ಅತಿ ದೊಡ್ಡ ಉದ್ಯೋಗ ಕೇಂದ್ರಗಳಿಗೆ ಈ ರೈಲು ಸಂಪರ್ಕ ಕಲ್ಪಿಸುವುದರಿಂದ, ಪ್ರತಿದಿನ ಟ್ರಾಫಿಕ್ ಕಿರಿಕಿರಿಯಲ್ಲಿ ಸಿಲುಕುತ್ತಿದ್ದ ಸಾವಿರಾರು ಐಟಿ ಮತ್ತು ಇತರ ಉದ್ಯೋಗಿಗಳಿಗೆ ಇದು ದೊಡ್ಡ ನೆಮ್ಮದಿ ತಂದಿದೆ.
ಈ ಕಾರಿಡಾರ್ ಅಸ್ತಿತ್ವದಲ್ಲಿರುವ ಹಳೆಯ ಮೆಟ್ರೋ ನೆಟ್ವರ್ಕ್ನೊಂದಿಗೆ ಸುಲಭವಾಗಿ ಸಂಯೋಜನೆಗೊಳ್ಳಲಿದ್ದು, ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿ, ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ.
ಎರಡನೇ ಹಂತದ ಕಾಮಗಾರಿಗಳಿಗೆ ಅಡಿಗಲ್ಲು
ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಪುಣೆ ಮೆಟ್ರೋದ ಎರಡನೇ ಹಂತದ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ದಾರೆ. ಈ ಹಂತದಲ್ಲಿ ಲೈನ್ಗಳಾದ 2A, 2B, 4 ಮತ್ತು 4A ಅನ್ನು ಒಳಗೊಂಡ ಬೃಹತ್ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಲೈನ್ 2A ವನಾಜ್ನಿಂದ ಚಾಂದನಿ ಚೌಕ್ ಹಾಗೂ ಲೈನ್ 2B ರಾಮವಾಡಿಯನ್ನು ವಿಠ್ಠಲವಾಡಿಗೆ ಸಂಪರ್ಕಿಸಲಿದೆ. 25.52 ಕಿ.ಮೀ ಉದ್ದದ ಲೈನ್ 4 ಖರಾಡಿಯಿಂದ ಖಡಕ್ವಾಸ್ಲಾವನ್ನು ಸಂಪರ್ಕಿಸಿದರೆ, 6.12 ಕಿ.ಮೀ ಉದ್ದದ ಲೈನ್ 4A ನಾಲ್ ಸ್ಟಾಪ್ನಿಂದ ಮಾಣಿಕ್ ಬಾಗ್ ತನಕ ಸಾಗಲಿದೆ.
ಇದನ್ನೂ ಓದಿ:
ಈ ಹೊಸ ಮಾರ್ಗಗಳು ಮಗರ್ಪಟ್ಟಾ, ಹಡಪ್ಸರ್, ಸ್ವರಗೇಟ್, ನಾಂದೇಡ್ ಸಿಟಿ ಮತ್ತು ಪುಣೆ ಕಂಟೋನ್ಮೆಂಟ್ನಂತಹ ಪ್ರಮುಖ ವಸತಿ ಮತ್ತು ವಾಣಿಜ್ಯ ಪ್ರದೇಶಗಳ ಮೂಲಕ ಹಾದುಹೋಗಲಿವೆ. ಅಲ್ಲದೆ, ಸ್ವರಗೇಟ್ ಮತ್ತು ಖರಾಡಿ ಬೈಪಾಸ್ನಂತಹ ಪ್ರಮುಖ ನಿಲ್ದಾಣಗಳಲ್ಲಿ ಅಂತರನಗರ ಬಸ್ ನಿಲ್ದಾಣಗಳೊಂದಿಗೆ ಮೆಟ್ರೋವನ್ನು ಇಂಟರ್ಚೇಂಜ್ ಸೌಲಭ್ಯದ ಮೂಲಕ ಜೋಡಿಸುತ್ತಿರುವುದರಿಂದ ಇಡೀ ನಗರದ ಜನರಿಗೆ ಒಂದೇ ಸೂರಿನಡಿ ಸುಲಭ ಪ್ರಯಾಣದ ಸೌಲಭ್ಯ ಸಿಗಲಿದೆ.



