ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.
ದೇಶಾದ್ಯಂತ 1,364 ಕ್ಯಾನ್ಸರ್ ಔಷಧಗಳ ಪರಿಷ್ಕೃತ ಗರಿಷ್ಠ ಚಿಲ್ಲರೆ ಬೆಲೆ (MRP) ಸೋಮವಾರದಿಂದ ಜಾರಿಗೆ ಬಂದಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಕೈಗೊಂಡಿರುವ ಈ ಕ್ರಮದಿಂದ ಹಲವು ಔಷಧಗಳ ಬೆಲೆ ಶೇ.50ಕ್ಕಿಂತಲೂ ಹೆಚ್ಚು ಕಡಿಮೆಯಾಗಿದ್ದು, ರೋಗಿಗಳಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ಸಿಗುವ ನಿರೀಕ್ಷೆಯಿದೆ.
679 ಬ್ರ್ಯಾಂಡ್‌ಗಳ ಬೆಲೆಯಲ್ಲಿ ಶೇ.50ಕ್ಕೂ ಹೆಚ್ಚು ಇಳಿಕೆ
137 ಕ್ಯಾನ್ಸರ್ ಔಷಧಗಳ ಮೇಲಿನ ವ್ಯಾಪಾರ ಲಾಭದ ಮಿತಿಯನ್ನು ನಿಯಂತ್ರಿಸುವ ನಿರ್ಧಾರದ ಪರಿಣಾಮವಾಗಿ ಈ ಬೆಲೆ ಪರಿಷ್ಕರಣೆ ಮಾಡಲಾಗಿದೆ. ನವೆಂಬರ್ 8ರ ಮಾಹಿತಿಯ ಪ್ರಕಾರ, 85 ಔಷಧ ಕಂಪನಿಗಳು 121 ಔಷಧಗಳಿಗೆ ಸೇರಿದ 1,364 ಉತ್ಪನ್ನಗಳ ಪರಿಷ್ಕೃತ ಬೆಲೆಗಳನ್ನು ಪ್ರಕಟಿಸಿವೆ. ಈ ಪೈಕಿ 679 ಬ್ರ್ಯಾಂಡ್‌ಗಳ ಬೆಲೆ ಶೇ.50ಕ್ಕಿಂತ ಹೆಚ್ಚು ಇಳಿಕೆಯಾಗಿದೆ. ಗರಿಷ್ಠ ಬೆಲೆ ಕಡಿತ ಶೇ.96.45ರಷ್ಟಿದೆ. ಇದರಿಂದ ಗ್ರಾಹಕರಿಗೆ ವಾರ್ಷಿಕವಾಗಿ ಸುಮಾರು 3,540.38 ಕೋಟಿ ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:
40 ಸಾವಿರದ ಔಷಧ ಈಗ 2,720ಕ್ಕೆ
ಕೆಲವು ಪ್ರಮುಖ ಔಷಧಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಪಾಲ್ಬೊಸಿಕ್ಲಿಬ್ 125 ಮಿ.ಗ್ರಾಂ ಕ್ಯಾಪ್ಸೂಲ್ ಬೆಲೆ 40,421.33ರಿಂದ 2,720ಕ್ಕೆ ಇಳಿಕೆಯಾಗಿದೆ. ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯ ಅಬಿರಾಟೆರೋನ್ ಅಸಿಟೇಟ್ ಮಾತ್ರೆಗಳ ಬೆಲೆ 41,250ರಿಂದ 3,218.23ಕ್ಕೆ ಕಡಿತಗೊಂಡಿದೆ.
ಹೆಚ್ಚುವರಿ ಹಣ ವಸೂಲಿ ಮಾಡಿದರೆ ಕ್ರಮ
ಪರಿಷ್ಕೃತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವ ಔಷಧ ಅಂಗಡಿಗಳು ಹಾಗೂ ಆಸ್ಪತ್ರೆಗಳ ಫಾರ್ಮಸಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿದೆ. ಔಷಧಗಳ ನಿಖರ ಬೆಲೆಯನ್ನು ‘ಫಾರ್ಮಾ ಸಹಿ ದಾಮ್’ ಆ್ಯಪ್ ಅಥವಾ NPPA ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ದೂರುಗಳಿಗಾಗಿ ‘ಫಾರ್ಮಾ ಜನ ಸಮಾಧಾನ್’ ಪೋರ್ಟಲ್ ಅಥವಾ 1800-111-255 ಸಹಾಯವಾಣಿಯನ್ನು ಸಂಪರ್ಕಿಸಬಹುದು.



