November 10, 2026
Tuesday, November 10, 2026
spot_img

ಅರಣ್ಯಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ‘ದೋರ್ಸ್ ರಾಣಿ’: ಕೇಜ್ ಕೆಳಗೆ ಸುರಂಗ ತೋಡಿ ಮತ್ತೆ ಎಸ್ಕೇಪ್ ಆದ ಹುಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಸ್ಸಾಂನಿಂದ ಸೆರೆಹಿಡಿದು ಪಶ್ಚಿಮ ಬಂಗಾಳಕ್ಕೆ ಕರೆತಂದಿದ್ದ ಹುಲಿಯೊಂದು ಕೇವಲ ಐದು ದಿನಗಳಲ್ಲೇ ಮತ್ತೊಮ್ಮೆ ಅರಣ್ಯಾಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಿದೆ.

ಪಶ್ಚಿಮ ಬಂಗಾಳದ ಮೊದಲ ಹುಲಿ ಸ್ಥಳಾಂತರ ಯೋಜನೆಯ ಭಾಗವಾಗಿರುವ ಮೂರು ವರ್ಷದ ಹೆಣ್ಣು ಹುಲಿ ‘ದೋರ್ಸ್ ರಾಣಿ’, ಬಕ್ಸಾ ಹುಲಿ ಸಂರಕ್ಷಿತ ಅರಣ್ಯದಲ್ಲಿದ್ದ ವಿಶೇಷ ಆವರಣದಿಂದ ತಪ್ಪಿಸಿಕೊಂಡಿದೆ. ಈ ಘಟನೆ ಅರಣ್ಯ ಇಲಾಖೆಗೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ.

ಕಾಂಕ್ರೀಟ್ ತಳಹದಿಯ ಕೆಳಗೆ ಸುರಂಗ!

ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ, ಹುಲಿಯನ್ನು 2.2 ಹೆಕ್ಟೇರ್ ವಿಸ್ತೀರ್ಣದ ತಾತ್ಕಾಲಿಕ ವಾಸಸ್ಥಳದಲ್ಲಿ ಇರಿಸಲಾಗಿತ್ತು. ಆವರಣದ ಬೇಲಿಗೆ ಎರಡು ಅಡಿ ದಪ್ಪ ಹಾಗೂ ನಾಲ್ಕು ಅಡಿ ಆಳದ ಕಾಂಕ್ರೀಟ್ ಅಡಿಪಾಯ ನಿರ್ಮಿಸಲಾಗಿತ್ತು. ಆದರೆ ಹುಲಿ ಅದರ ಕೆಳಗಿನ ಮಣ್ಣನ್ನು ಅಗೆದು ಸುರಂಗದ ಮೂಲಕ ಹೊರಬಂದಿದೆ. ಭಾನುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಹುಲಿ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಅದರ ದೇಹಕ್ಕೆ ಅಳವಡಿಸಿರುವ ರೇಡಿಯೊ ಕಾಲರ್ ಕಾರ್ಯನಿರ್ವಹಿಸುತ್ತಿದ್ದು, ಅದರ ಸಂಕೇತಗಳ ಮೂಲಕ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ:

60 ಸಿಬ್ಬಂದಿಯಿಂದ ಹುಡುಕಾಟ

ಹುಲಿ ಈಗಾಗಲೇ ಬಾಲಾ ನದಿಯನ್ನು ದಾಟಿ ಮತ್ತೆ ಅಸ್ಸಾಂ ಕಡೆಗೆ ಸಾಗುತ್ತಿದೆ ಎನ್ನಲಾಗಿದೆ. ಬಕ್ಸಾ ಅರಣ್ಯದ 27 ಮೈಲ್ ಪ್ರದೇಶದ ಸಮೀಪ ಕೊನೆಯದಾಗಿ ಅದರ ಚಲನವಲನ ಪತ್ತೆಯಾಗಿತ್ತು. ಆದರೆ ದಟ್ಟ ಅರಣ್ಯದ ಕೆಲವು ಪ್ರದೇಶಗಳಲ್ಲಿ ರೇಡಿಯೊ ಸಂಕೇತಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಹೀಗಾಗಿ 60 ಅರಣ್ಯ ಸಿಬ್ಬಂದಿ, ಮೂರು ಆನೆಗಳು ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಹುಲಿಯ ಸ್ಥಳಾಂತರ ಯೋಜನೆಗೆ ಸವಾಲು

ಬಿಹಾರದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಿಂದ ಸೆಪ್ಟೆಂಬರ್ 30ರಂದು ದೋರ್ಸ್ ರಾಣಿಯನ್ನು ಪಶ್ಚಿಮ ಬಂಗಾಳಕ್ಕೆ ವಿಮಾನದ ಮೂಲಕ ಕರೆತರಲಾಗಿತ್ತು. ಅಕ್ಟೋಬರ್ 2ರಂದು ಬಕ್ಸಾ ಅರಣ್ಯದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಅಕ್ಟೋಬರ್ 24ರಂದು ಅದು ಅಸ್ಸಾಂನ ರೈಮೋನಾ ರಾಷ್ಟ್ರೀಯ ಉದ್ಯಾನವನಕ್ಕೆ ತೆರಳಿತ್ತು. ನವೆಂಬರ್ 3ರಂದು ಅದನ್ನು ಸೆರೆಹಿಡಿದು ಮತ್ತೆ ಬಕ್ಸಾಕ್ಕೆ ಕರೆತರಲಾಗಿತ್ತು.

ಹುಲಿಯನ್ನು ಸುರಕ್ಷಿತವಾಗಿ ಅರಣ್ಯದಲ್ಲೇ ಉಳಿಸುವುದು ಹಾಗೂ ಮತ್ತೆ ಅಸ್ಸಾಂ ಪ್ರವೇಶಿಸದಂತೆ ತಡೆಯುವುದು ಈಗ ಅರಣ್ಯ ಇಲಾಖೆಯ ಮುಂದಿರುವ ಪ್ರಮುಖ ಸವಾಲಾಗಿದೆ.

Must Read

Skip to toolbar