November 12, 2026
Thursday, November 12, 2026
spot_img

ನವೆಂಬರ್ 20ಕ್ಕೆ ‘ಓಂ: ಚಾಪ್ಟರ್ 1’ ಅಬ್ಬರ ಶುರು: ಕಥೆ, ಅವಧಿಯ ಕುತೂಹಲಕಾರಿ ಮಾಹಿತಿ ಬಹಿರಂಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ ಧನುಷ್ ಮತ್ತು ಮಮ್ಮುಟ್ಟಿ ಮೊದಲ ಬಾರಿಗೆ ಒಂದೇ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ‘ಅಮರನ್’ ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ ‘ಓಂ: ಚಾಪ್ಟರ್ 1 ಉಧಿರಂ: ದಿ ಬ್ಲಡ್ ವುಡ್’ ಇದೇ ನವೆಂಬರ್ 20, 2026ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ತೆರೆಕಾಣಲಿದೆ. ಈ ನಡುವೆ ಚಿತ್ರದ ಕಥಾಸಾರಾಂಶ ಹಾಗೂ ಅವಧಿಯ ಕುರಿತಾದ ಮಹತ್ವದ ಮಾಹಿತಿ ಹೊರಬಿದ್ದಿದ್ದು, ಸಿನಿಪ್ರಿಯರ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.

ಮೂವೀಸ್ ಸಿಂಗಾಪುರ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ‘ಓಂ’ ಚಿತ್ರವು ಅತ್ಯಂತ ಭಯಾನಕ ಹಾಗೂ ಭಾವನಾತ್ಮಕ ಜಗತ್ತಿನ ಕಥೆಯನ್ನು ಹೇಳಲಿದೆ. ಮನುಷ್ಯನ ದುರಾಸೆ, ಅಧಿಕಾರದ ದಾಹ ಮತ್ತು ಬಡತನವು ಹೇಗೆ ಕ್ರೌರ್ಯ ಹಾಗೂ ಹಿಂಸೆಯನ್ನು ಹುಟ್ಟುಹಾಕುತ್ತದೆ ಎಂಬುದನ್ನು ಈ ಸಿನಿಮಾ ಎಳೆಎಳೆಯಾಗಿ ಬಿಚ್ಚಿಡಲಿದೆ.

ವರದಿಗಳ ಪ್ರಕಾರ, ಈ ಚಿತ್ರದ ಅವಧಿ ಸುಮಾರು 179 ನಿಮಿಷಗಳು ಅಂದರೆ 2 ಗಂಟೆ 59 ನಿಮಿಷಗಳಿರಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಚಿತ್ರತಂಡದಿಂದ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ. ಎರಡು ಭಾಗಗಳಲ್ಲಿ ಮೂಡಿಬರಲಿರುವ ಈ ಸರಣಿಯ ಮೊದಲ ಭಾಗ ಇದಾಗಿದ್ದು, ಕಥೆಯ ಆಳಕ್ಕೆ ತಕ್ಕಂತೆ ಸುದೀರ್ಘ ಅವಧಿಯನ್ನು ಹೊಂದಿರಲಿದೆ ಎನ್ನಲಾಗಿದೆ.

ಚಿತ್ರದಲ್ಲಿ ಧನುಷ್ ಮತ್ತು ಮಮ್ಮುಟ್ಟಿ ಜೊತೆಗೆ ಸಾಯಿ ಪಲ್ಲವಿ, ಶ್ರೀಲೀಲಾ ಹಾಗೂ ಹಿರಿಯ ನಟ ನಾಸಿರುದ್ದೀನ್ ಶಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಯಿ ಅಭ್ಯಂಕರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ಈ ಮೊದಲು ಅಕ್ಟೋಬರ್‌ನಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದ ಈ ಚಿತ್ರವನ್ನು ಸ್ವತಃ ನಟ-ನಿರ್ಮಾಪಕ ಧನುಷ್ ಮುಂದೂಡಿದ್ದರು. ರಜನಿಕಾಂತ್ ಅವರ ‘ಜೈಲರ್ 2’ ಮತ್ತು ಸೂರ್ಯ ನಟನೆಯ ‘ಸೀನ್’ ಚಿತ್ರಗಳೊಂದಿಗೆ ಬಾಕ್ಸ್ ಆಫೀಸ್ ಘರ್ಷಣೆ ತಪ್ಪಿಸಲು ಹಾಗೂ ಚಿತ್ರರಂಗದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಒಟ್ಟಿನಲ್ಲಿ, ಬಲಿಷ್ಠ ಕಥೆ ಮತ್ತು ದಿಗ್ಗಜರ ಅಭಿನಯದೊಂದಿಗೆ ‘ಓಂ: ಚಾಪ್ಟರ್ 1’ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಿದ್ಧವಾಗಿದೆ.

Must Read

Skip to toolbar