ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ವೇಗ ನೀಡುವ ‘ನಮ್ಮ ಮೆಟ್ರೋ’ ಪಿಂಕ್ ಲೈನ್ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಂಟಿಯಾಗಿ ಚಾಲನೆ ನೀಡಿದ್ದಾರೆ.
ಕಾಳೇನಅಗ್ರಹಾರದಿಂದ ಎಸ್ಜಿ ಪಾಳ್ಯದವರೆಗಿನ 7.5 ಕಿ.ಮೀ ಮಾರ್ಗವು ಸಾರ್ವಜನಿಕ ಸೇವೆಗೆ ಮುಕ್ತಗೊಂಡಿದ್ದು, ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಅವರು ಎಸ್ಜಿ ಪಾಳ್ಯದಿಂದ ಬಿಳೇಕಹಳ್ಳಿಯ ಐಐಎಂಬಿವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ರಾಜ್ಯಪಾಲೆ ಸುಧಾ ಯಾದವ್, ಸಚಿವ ಕೃಷ್ಣ ಬೈರೇಗೌಡ ಹಾಗೂ ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.
ವೇದಿಕೆಯಲ್ಲೇ ಪ್ರಧಾನಿಗೆ ಸಿಎಂ ಮನವಿ ಪತ್ರ
ಉದ್ಘಾಟನಾ ಸಮಾರಂಭದ ವೇದಿಕೆಯಲ್ಲೇ ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಹಲವು ಪ್ರಮುಖ ಅಭಿವೃದ್ಧಿ ಹಾಗೂ ರೈತರ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಹಸ್ತಾಂತರಿಸಿದರು.
ಮೆಟ್ರೋ ವಿಸ್ತರಣೆ ಮತ್ತು ಆರ್ಥಿಕ ನೆರವು
ಮುಂದಿನ 10 ವರ್ಷಗಳಲ್ಲಿ ಬೆಂಗಳೂರಿನಲ್ಲಿ 500 ಕಿ.ಮೀ ಮೆಟ್ರೋ ಜಾಲ ನಿರ್ಮಿಸುವ ಗುರಿಯಿದ್ದು, ಇದಕ್ಕೆ ಕೇಂದ್ರದ ಸಂಪೂರ್ಣ ಸಹಕಾರ ಕೋರಲಾಗಿದೆ. ಮೆಟ್ರೋ ಯೋಜನೆಗಳ ಅನುಮೋದನೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಿ, ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಮನವಿ ಮಾಡಲಾಗಿದೆ.
ಡಿಪಿಆರ್ (DPR) ಅನುಮೋದನೆಯ ನಂತರ ಹೆಚ್ಚಾಗುವ ವೆಚ್ಚ ಹಾಗೂ ಮೆಟ್ರೋ ಕಾರ್ಯಾಚರಣೆಯ ನಷ್ಟದಲ್ಲಿ ಕೇಂದ್ರ ಸರ್ಕಾರವೂ ಪಾಲು ಪಡೆಯಬೇಕು ಎಂದು ಕೋರಲಾಗಿದೆ. ಜೊತೆಗೆ ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿ ಸಾಲ ಒದಗಿಸಲು ಮನವಿ ಮಾಡಲಾಗಿದೆ.
ಇದನ್ನೂ ಓದಿ:
ಡಬಲ್ ಡೆಕ್ಕರ್ ಮತ್ತು ರೆಡ್ ಲೈನ್ ಮೆಟ್ರೋ
42ಕಿ.ಮೀ ಉದ್ದದ ಮೆಟ್ರೋ ಹಂತ-3 ಮಾರ್ಗದಲ್ಲಿ ತಾಂತ್ರಿಕವಾಗಿ ಸಾಧ್ಯವಿರುವ ಕಡೆ ಡಬಲ್ ಡೆಕ್ಕರ್ ರಸ್ತೆ ನಿರ್ಮಿಸಲು ಅನುಮತಿ ಕೋರಲಾಗಿದೆ. ಇದರ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲು ಸಿದ್ಧವಿದೆ ಎಂದು ಸಿಎಂ ತಿಳಿಸಿದ್ದಾರೆ. ಹಾಗೆಯೇ ವಿಮಾನ ನಿಲ್ದಾಣ ಮತ್ತು ಉದ್ಯೋಗ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಸರ್ಜಾಪುರ-ಹೆಬ್ಬಾಳ ‘ರೆಡ್ ಲೈನ್’ ಮೆಟ್ರೋದ ಪರಿಷ್ಕೃತ ಪ್ರಸ್ತಾವನೆಗೆ ತಕ್ಷಣ ಅನುಮೋದನೆ ನೀಡುವಂತೆ ಒತ್ತಾಯಿಸಲಾಗಿದೆ.
ಬರ ಪರಿಹಾರಕ್ಕೆ 22,400 ಕೋಟಿ ಬೇಡಿಕೆ
ರಾಜ್ಯದ 240 ತಾಲೂಕುಗಳ ಪೈಕಿ 226 ತಾಲೂಕುಗಳು ಬರಪೀಡಿತವಾಗಿದ್ದು, 58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ಅಂದಾಜು 62,482 ಕೋಟಿ ರೂ. ಆರ್ಥಿಕ ನಷ್ಟ ಸಂಭವಿಸಿದ್ದು, NDRF ಅಡಿಯಲ್ಲಿ 22,400.58 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಸಿಎಂ ಒತ್ತಾಯಿಸಿದ್ದಾರೆ.
ಕಬ್ಬು ಬೆಳೆಗಾರರ ಹಿತರಕ್ಷಣೆ ಮತ್ತು ಕಸ್ತೂರಿರಂಗನ್ ವರದಿ
2026-27ನೇ ಸಾಲಿಗೆ ಪ್ರತಿ ಟನ್ ಕಬ್ಬಿಗೆ 3,650 ರೂ.ಇರುವ ಎಫ್ಆರ್ಪಿ ದರವನ್ನು 5,500 ರೂ.ಗೆ ಹೆಚ್ಚಿಸಬೇಕು ಎಂದು ರೈತರ ಪರವಾಗಿ ಬೇಡಿಕೆ ಇಡಲಾಗಿದೆ. ಕೆ.ಜಿಗೆ 31ರೂ. ಇರುವ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪರಿಷ್ಕರಿಸಬೇಕು ಮತ್ತು ಕಬ್ಬಿನ ಉಪ ಉತ್ಪನ್ನಗಳ ಲಾಭದಲ್ಲಿ ರೈತರಿಗೂ ಪಾಲು ನೀಡಬೇಕು ಎಂದು ಕೋರಲಾಗಿದೆ.
ಹಾಗೆಯೇಪಶ್ಚಿಮ ಘಟ್ಟದ ಕಸ್ತೂರಿರಂಗನ್ ವರದಿ ಜಾರಿ ಕುರಿತು ರಾಜ್ಯದ ಜನರಲ್ಲಿರುವ ಆತಂಕವನ್ನೂ ಸಿಎಂ ಪ್ರಧಾನಿಗಳ ಗಮನಕ್ಕೆ ತಂದಿದ್ದಾರೆ.



