November 13, 2026
Friday, November 13, 2026
spot_img

ಬನವಾಸಿ ಬಳಿ ಭೀಕರ ಅಪಘಾತ: ಬೈಕ್‌ಗೆ ಲಾರಿ ಡಿಕ್ಕಿ, ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ ಬನವಾಸಿ:

ಬೈಕ್‌ನಲ್ಲಿ ಪತಿಯೊಂದಿಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಅಂಡಗಿ ಗ್ರಾಮ ಪಂಚಾಯಿತಿ ಸಮೀಪ ಶುಕ್ರವಾರ ನಡೆದಿದೆ.

ಅಂಡಗಿ ಗ್ರಾಮದ ಸರೋಜಾ ಮಾಲತೇಶ ನಾಯ್ಕ (52) ಮೃತಪಟ್ಟ ಮಹಿಳೆ. ಅವರ ಪತಿ ಮಾಲತೇಶ ನಾಯ್ಕ (63) ಬೈಕ್ ಚಲಾಯಿಸುತ್ತಿದ್ದು, ಸರೋಜಾ ಹಿಂಬದಿ ಸವಾರೆಯಾಗಿದ್ದರು.

ಶುಕ್ರವಾರ ಮಧ್ಯಾಹ್ನ ಪತಿ-ಪತ್ನಿ ಕೆಳಗಿನ ಅಂಡಗಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ವಾಪಸ್ ತಮ್ಮ ಮನೆಗೆ ಬರುತ್ತಿದ್ದರು. ಈ ವೇಳೆ ಅಂಡಗಿ ಗ್ರಾಮದ ಸಿಮೆಂಟ್ ರಸ್ತೆಯಿಂದ ಬನವಾಸಿ-ದಾಸನಕೊಪ್ಪ ಮುಖ್ಯ ರಸ್ತೆಗೆ ಬೈಕ್ ಪ್ರವೇಶಿಸುತ್ತಿದ್ದಾಗ, ಬನವಾಸಿ ಕಡೆಯಿಂದ ದಾಸನಕೊಪ್ಪ ಕಡೆಗೆ ಅತಿವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ದಂಪತಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಸರೋಜಾ ಅವರ ತಲೆಯ ಮೇಲೆ ಲಾರಿಯ ಚಕ್ರ ಹರಿದ ಪರಿಣಾಮ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಲತೇಶ ಅವರ ಬಲಗಾಲಿಗೂ ಗಾಯಗಳಾಗಿವೆ.

ಇದನ್ನೂ ಓದಿ:

ಸ್ಥಳೀಯರಾದ ಅನಿಲ್ ಬಸಪ್ಪ ನಾಯ್ಕ ಹಾಗೂ ನಾಗರಾಜ ಗೌಡ ಗಾಯಾಳುಗಳಿಗೆ ನೆರವಾಗಿದ್ದಾರೆ. ಮೃತದೇಹವನ್ನು ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ಲಾರಿ ಚಾಲಕ ತಾಹಿರ್ ಮಹಮ್ಮದ್ ಸಾದಿಕ್ ಮುಲ್ಲಾ ಮುಂಡಗೋಡ ತಾಲೂಕಿನ ಮಳಗಿ ಸಮೀಪದ ಭದ್ರಾಪುರ ನಿವಾಸಿ ಎಂದು ತಿಳಿದುಬಂದಿದೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

Skip to toolbar