ಹೊಸದಿಗಂತ ವರದಿ ಬೆಳಗಾವಿ:
ನಗರದಲ್ಲಿ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಸಿಬಿಎಸ್ಇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್-2026 ಆಯೋಜಿಸಲಾಗಿದ್ದು, ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ 1,200ಕ್ಕೂ ಅಧಿಕ ಸ್ಕೇಟರ್ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸ್ಕೇಟಿಂಗ್ ತರಬೇತುದಾರ ಸೂರ್ಯಕಾಂತ್ ರಮೇಶ್ ಹಿಂಡಲಗೇಕರ್ ತಿಳಿಸಿದರು.

ಶುಕ್ರವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿರ್ಲಾ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಗ್ಲೋಬಲ್ ಇಂಟರ್ನ್ಯಾಷನಲ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ, ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಹಾಗೂ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ ಸಹಯೋಗದೊಂದಿಗೆ ನ.16ರಿಂದ 18ರವರೆಗೆ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ನ ಅಂತಾರಾಷ್ಟ್ರೀಯ ಸ್ಕೇಟಿಂಗ್ ರಿಂಕ್ನಲ್ಲಿ ಸ್ಪರ್ಧೆಗಳು ನಡೆಯಲಿವೆ.
ದೇಶದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಮಧ್ಯ ವಲಯಗಳ ಸ್ಕೇಟರ್ಗಳೊಂದಿಗೆ ದುಬೈ, ಸೌದಿ ಅರೇಬಿಯಾ, ಒಮನ್, ಕತಾರ್, ಬಹ್ರೇನ್, ಯುಎಇ, ಯೆಮನ್ ಮತ್ತು ಕುವೈತ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ರೋಡ್ ಸ್ಕೇಟಿಂಗ್ ಸ್ಪರ್ಧೆಗಳು ಬಿಎಸ್ಎನ್ಎಲ್ ಕಚೇರಿಯಿಂದ ಚಂದನ್ ಚಿತ್ರಮಂದಿರದವರೆಗಿನ ರಸ್ತೆಯಲ್ಲಿ ನಡೆಯಲಿವೆ.
ಇದನ್ನೂ ಓದಿ:
ನ.16ರಂದು ಶಾಸಕ ಅಭಯ ಪಾಟೀಲ ಉದ್ಘಾಟಿಸಲಿದ್ದು, ಮೇಯರ್ ಪ್ರೀತಿ ಕಾಮಕರ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸ್ಪರ್ಧೆಗಳ ಸುಗಮ ನಿರ್ವಹಣೆಗೆ ಅಧಿಕಾರಿಗಳು, ತರಬೇತುದಾರರು, ಶಿಕ್ಷಕರು, ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ಸೇರಿದಂತೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.
ಸ್ಪರ್ಧೆಗಳನ್ನು ಯಶಸ್ವಿಗೊಳಿಸಲು ಸೂರ್ಯಕಾಂತ್ ಹಿಂಡಲಗೇಕರ್, ನಿಖಿಲ್ ಚಿಂದಕ, ಯೋಗೇಶ ಕುಲಕರ್ಣಿ, ವಿಠ್ಠಲ ಗಂಗಣೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ. ಈ ಕ್ರೀಡಾಕೂಟದ ಮೂಲಕ ಬೆಳಗಾವಿ ರಾಷ್ಟ್ರೀಯ ಕ್ರೀಡಾ ಭೂಪಟದಲ್ಲಿ ಮತ್ತೊಂದು ಮಹತ್ವದ ಗುರುತು ಮೂಡಿಸಲಿದೆ.



