November 14, 2026
Saturday, November 14, 2026
spot_img

ಪಿಕಪ್ ವಾಹನ-ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ ಸಿದ್ದಾಪುರ:

ತಾಲೂಕಿನ ಅರೆಂದೂರ ಸಮೀಪ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತ ಯುವಕನನ್ನು ಸಿದ್ದಾಪುರ ತಾಲೂಕಿನ ಬೇಡ್ಕಣಿ ಹುಲಿಮನೆ ರಸ್ತೆಯ ಹೊಂಡಕುಳಿ ನಿವಾಸಿ ಪ್ರಜ್ವಲ್ ರಾಜು ನಾಯ್ಕ (26) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಅವರು ಊರಿಗೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಬೇಡ್ಕಣಿ ಕೆರೆಮಠದ ನಿವಾಸಿ, ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಪ್ರಭು ರಾಮಚಂದ್ರ ನಾಯ್ಕ (21) ಅವರಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ:

ಶನಿವಾರ ಮಧ್ಯಾಹ್ನ ಪ್ರಜ್ವಲ್ ಮತ್ತು ಪ್ರಭು ಬೈಕ್‌ನಲ್ಲಿ ತೆರಳುತ್ತಿದ್ದಾಗ ಅರೆಂದೂರ ಬಳಿ ಎದುರುಗಡೆಯಿಂದ ಅತಿವೇಗವಾಗಿ ಬಂದ ಪಿಕಪ್ ವಾಹನವೊಂದು ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಪ್ರಜ್ವಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಪಿಕಪ್ ವಾಹನವನ್ನು ಶಿವಮೊಗ್ಗದ ಶರಾವತಿ ನಗರದ ನಿವಾಸಿ ಕಾರ್ತಿಕ ಶಿವನಂಜೇ ಗೌಡ ಎಂಬಾತ ಚಾಲನೆ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

Skip to toolbar