ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಪುರುಷರ ಕ್ರಿಕೆಟ್ ತಂಡವು 1968ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಾಗ, ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದು ವಿದೇಶಿ ನೆಲದಲ್ಲಿ ತನ್ನ ಚೊಚ್ಚಲ ಟೆಸ್ಟ್ ಸರಣಿ ಜಯದ ಐತಿಹಾಸಿಕ ಸಾಧನೆ ಮಾಡಿತ್ತು. ಆದರೆ, ನಂತರದ ದಶಕಗಳಲ್ಲಿ ಭಾರತೀಯ ಕ್ರಿಕೆಟ್ ಬಲಿಷ್ಠವಾಗಿ ಬೆಳೆದರೂ, ಕಿವೀಸ್ ನೆಲದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಟೀಮ್ ಇಂಡಿಯಾಗೆ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ.
ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಂತಹ ಕಠಿಣ ದೇಶದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ, ನ್ಯೂಜಿಲೆಂಡ್ನಲ್ಲಿ ಮಾತ್ರ ಗೆಲುವಿಗಾಗಿ ಪರದಾಡಿದೆ. ಕಳೆದ 50 ವರುಷಗಳಲ್ಲಿ ಭಾರತ ಇಲ್ಲಿ ಗೆದ್ದಿರುವುದು ಕೇವಲ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಮಾತ್ರ. ಅದು ಕೂಡ ಬರೋಬ್ಬರಿ 18 ವರುಷ ಗಳ ಹಿಂದೆ ಹ್ಯಾಮಿಲ್ಟನ್ನಲ್ಲಿ 10 ವಿಕೆಟ್ಗಳ ಜಯ ದಾಖಲಿಸಿದ್ದು ಕೊನೆಯದಾಗಿತ್ತು. ಇದೀಗ ಶುಭಮನ್ ಗಿಲ್ ನಾಯಕತ್ವದ ಯುವ ಭಾರತ ತಂಡವು ಆ ಹಳೆಯ ಕಹಿ ದಾಖಲೆಯನ್ನು ಅಳಿಸಿ, ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.
ಈ ಸರಣಿಯು ಕೇವಲ ಇತಿಹಾಸ ಬದಲಿಸುವುದಕ್ಕಷ್ಟೇ ಅಲ್ಲದೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿಯೂ ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡಕ್ಕೆ ಇತರ ತಂಡಗಳಿಂದ ತೀವ್ರ ಪೈಪೋಟಿ ಎದುರಾಗಿದೆ. ಹೀಗಾಗಿ, ಗಾಯದ ಸಮಸ್ಯೆ ಹಾಗೂ ಆಟಗಾರರ ಕೆಲಸದ ಒತ್ತಡದ ನಡುವೆಯೂ ಕಿವೀಸ್ ಪಡೆ ತವರಿನಲ್ಲಿ ಒಂದೇ ಒಂದು ಅಂಕವನ್ನೂ ಬಿಟ್ಟುಕೊಡಲು ಸಿದ್ಧವಿಲ್ಲ.
ಈಗಾಗಲೇ ಸೀಮಿತ ಓವರ್ಗಳ ಸರಣಿಯಲ್ಲಿ ಟ್ರೋಫಿ ಗೆದ್ದು ಬೀಗುತ್ತಿರುವ ಭಾರತದ ಯುವ ಆಟಗಾರರನ್ನು ಟೆಸ್ಟ್ ಸರಣಿಯಲ್ಲಿ ಕಟ್ಟಿಹಾಕಲು ಆತಿಥೇಯರು ರಣತಂತ್ರ ರೂಪಿಸಿದ್ದಾರೆ. ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಗುರುವಾರ (ನ. 19) ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಮುಂಜಾನೆ 3:30ಕ್ಕೆ ಪಂದ್ಯ ಶುರುವಾಗಲಿದೆ.



