November 21, 2026
Saturday, November 21, 2026
spot_img

‘ನೀವು ನನ್ನ ಸಹೋದರಿಯರಿದ್ದಂತೆ, ದಯವಿಟ್ಟು ಪ್ರತಿಭಟನೆ ಕೈಬಿಡಿ’: ಆಶಾ ಕಾರ್ಯಕರ್ತೆಯರಿಗೆ ಸಿಎಂ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಐದು ದಿನಗಳಿಂದ ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಬೀಡುಬಿಟ್ಟು ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಮನವೊಲಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಎಕ್ಸ್ ಮೂಲಕ ಪ್ರತಿಭಟನಾನಿರತರಿಗೆ ಸಂದೇಶ ನೀಡಿರುವ ಅವರು, ಸರ್ಕಾರದ ಪರವಾಗಿ ಕಳಕಳಿಯ ಮನವಿ ಮಾಡಿದ್ದಾರೆ.

“ಕುಟುಂಬದ ಜವಾಬ್ದಾರಿಗಳನ್ನು ಬದಿಗಿಟ್ಟು ನೀವು ಹಗಲು-ರಾತ್ರಿ ಎನ್ನದೆ ಹೋರಾಟ ನಡೆಸುತ್ತಿರುವುದು ನೋವು ತಂದಿದೆ. ನೀವು ಕೇವಲ ಆರೋಗ್ಯ ಕಾರ್ಯಕರ್ತೆಯರಲ್ಲ, ನನ್ನ ಪಾಲಿಗೆ ಸಹೋದರಿಯರಿದ್ದಂತೆ. ಒಬ್ಬ ಅಣ್ಣನ ಸ್ಥಾನದಲ್ಲಿ ನಿಂತು ಕೇಳಿಕೊಳ್ಳುತ್ತಿದ್ದೇನೆ, ದಯವಿಟ್ಟು ಮುಷ್ಕರವನ್ನು ಸ್ಥಗಿತಗೊಳಿಸಿ,” ಎಂದು ಸಿಎಂ ವಿನಂತಿಸಿದ್ದಾರೆ.

ಸಚಿವ ಸಂಪುಟದಲ್ಲಿ ಚರ್ಚಿಸುವ ಭರವಸೆ

ರಾಜ್ಯದಲ್ಲಿ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆಶಾ ಕಾರ್ಯಕರ್ತೆಯರ ಹುದ್ದೆಗಳನ್ನು ಪರಿಚಯಿಸಿ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಸಿಎಂ ನೆನಪಿಸಿದ್ದಾರೆ. ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ಮತ್ತು ಪರಿಶ್ರಮಕ್ಕೆ ಸರ್ಕಾರದ ಗೌರವವಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಿ, ಬೇಡಿಕೆಗಳಿಗೆ ಶಾಶ್ವತ ಪರಿಹಾರ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ಮುಷ್ಕರದ ಹಿನ್ನೆಲೆ ಮತ್ತು ಬೆಂಬಲ

ನವೆಂಬರ್ 17ರಿಂದ ಆರಂಭವಾಗಿರುವ ಈ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾಸಿಕ 15,000 ಗೌರವಧನ, ಬಾಕಿ ವೇತನ ಪಾವತಿ, ನಿವೃತ್ತಿ ಸೌಲಭ್ಯ, ಆ್ಯಪ್ ಕೆಲಸದ ಒತ್ತಡ ನಿವಾರಣೆ ಹಾಗೂ ವೈದ್ಯಕೀಯ ಭತ್ಯೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಲಾಗಿದೆ. ಈ ನಡುವೆ, ನಟಿ ರಮ್ಯಾ ಕೂಡ ಆಶಾ ಕಾರ್ಯಕರ್ತೆಯರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸರ್ಕಾರದ ಭರವಸೆಗಳು ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Must Read

Skip to toolbar