November 24, 2026
Tuesday, November 24, 2026
spot_img

ಕಾರ್ತಿಕ ದೀಪೋತ್ಸವಕ್ಕೆ ಕಟ್ಟೆಚ್ಚರ: ಮಧುರೈ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ನಡೆಯಲಿರುವ ಪವಿತ್ರ ಕಾರ್ತಿಕ ದೀಪೋತ್ಸವದ ಹಿನ್ನೆಲೆಯಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯಾದ್ಯಂತ ಜಿಲ್ಲಾಡಳಿತವು ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ. ಸಿಕಂದರ್ ಬಾದುಷಾ ದರ್ಗಾದ ಸಮೀಪವಿರುವ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯ ವಿವಾದಿತ ಸ್ತಂಭದ ಮೇಲೆ ದೀಪ ಹಚ್ಚುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಡುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಎಲ್ಲಿಯವರೆಗೆ ನಿರ್ಬಂಧ?

ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ಈ ಆದೇಶ ಹೊರಡಿಸಿದ್ದಾರೆ. ನವೆಂಬರ್ 23ರ ರಾತ್ರಿ 9 ಗಂಟೆಯಿಂದ ಜಾರಿಗೆ ಬಂದಿರುವ ಈ ನಿರ್ಬಂಧಗಳು, ನವೆಂಬರ್ 25ರ ಬೆಳಗ್ಗೆ 10 ಗಂಟೆಯವರೆಗೆ ಮುಂದುವರಿಯಲಿವೆ.

ಬಿಗಿ ಕ್ರಮಕ್ಕೆ ಕಾರಣವೇನು?

ದೀಪ ಹಚ್ಚುವ ಪರ ಮತ್ತು ವಿರೋಧದ ಸಂಘಟನೆಗಳು ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಸಜ್ಜಾಗುತ್ತಿವೆ ಎಂದು ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ವರದಿ ನೀಡಿದ್ದರು. ಹೊರ ಜಿಲ್ಲೆಗಳಿಂದಲೂ ಜನರು ಆಗಮಿಸಿ ತಿರುಪ್ಪರಂಕುಂಡ್ರಂ ಬೆಟ್ಟದ ಬಳಿ ಜಮಾಯಿಸಿದರೆ ಕಾನೂನು ಸುವ್ಯವಸ್ಥೆ ಹದಗೆಟ್ಟು, ಗಲಭೆ ಮಧುರೈನ ಇತರ ಭಾಗಗಳಿಗೂ ಹರಡುವ ಆತಂಕವಿತ್ತು. ಸಾರ್ವಜನಿಕ ಶಾಂತಿ ಮತ್ತು ಜನರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಸಭೆ, ಪ್ರತಿಭಟನೆ, ಮೆರವಣಿಗೆ ನಡೆಸುವುದನ್ನು ಹಾಗೂ ಸಾರ್ವಜನಿಕರು ಬೆಟ್ಟ ಹತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಯಾರಿಗೆಲ್ಲಾ ವಿನಾಯಿತಿ ನೀಡಲಾಗಿದೆ?

ನಿಷೇಧಾಜ್ಞೆಯ ನಡುವೆಯೂ ಅಗತ್ಯ ಮತ್ತು ಸಾಂಪ್ರದಾಯಿಕ ಚಟುವಟಿಕೆಗಳಿಗೆ ಜಿಲ್ಲಾಡಳಿತ ವಿನಾಯಿತಿ ನೀಡಿದೆ. ಅರುಳ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಧಿಕೃತ ಸಿಬ್ಬಂದಿ ನಡೆಸುವ ಸಾಂಪ್ರದಾಯಿಕ ಪೂಜೆ ಹಾಗೂ ಹಬ್ಬದ ವಿಧಿವಿಧಾನಗಳಿಗೆ ಯಾವುದೇ ಅಡ್ಡಿಯಿಲ್ಲ. ಹಾಗೆಯೇ, ನವೆಂಬರ್ ೨೦ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಅನುಷ್ಠಾನಕ್ಕೆ ಸಂಬಂಧಿಸಿದ ಕ್ರಮಗಳಿಗೆ ವಿನಾಯಿತಿ ಇದೆ. ಪೊಲೀಸರ ನಿಯಂತ್ರಣಕ್ಕೆ ಒಳಪಟ್ಟು ದರ್ಗಾ ಮತ್ತು ಇತರ ಸಂಸ್ಥೆಗಳಲ್ಲಿ ನಡೆಯುವ ದೈನಂದಿನ ಧಾರ್ಮಿಕ ಆಚರಣೆಗಳು, ಮದುವೆ ಹಾಗೂ ಅಂತ್ಯಕ್ರಿಯೆಯಂತಹ ಖಾಸಗಿ ಕಾರ್ಯಕ್ರಮಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Must Read

Skip to toolbar