March 15, 2026
Sunday, March 15, 2026
spot_img

ಪಾಕಿಸ್ತಾನಕ್ಕೆ ಕೊನೆಯ ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ‘ಚಾಂಪಿಯನ್’ ಸರ್ಫರಾಜ್ ನಿವೃತ್ತಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಕ್ರಿಕೆಟ್ ತಂಡದ ಯಶಸ್ವಿ ಮಾಜಿ ನಾಯಕ ಹಾಗೂ ಅನುಭವಿ ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ (38) ಅವರು ಮಾರ್ಚ್ 15ರ ಭಾನುವಾರದಂದು ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಸುಮಾರು ಒಂಬತ್ತು ವರ್ಷಗಳಿಂದ ಐಸಿಸಿ ಟ್ರೋಫಿಗಾಗಿ ಹಪಹಪಿಸುತ್ತಿರುವ ಪಾಕಿಸ್ತಾನಕ್ಕೆ, ಕೊನೆಯ ಬಾರಿಗೆ ಐಸಿಸಿ ಟ್ರೋಫಿ (2017 ಚಾಂಪಿಯನ್ಸ್ ಟ್ರೋಫಿ) ತಂದುಕೊಟ್ಟ ಕೀರ್ತಿ ಸರ್ಫರಾಜ್ ಅವರದ್ದಾಗಿತ್ತು.

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಪಾಕಿಸ್ತಾನವನ್ನು ಚಾಂಪಿಯನ್ ಮಾಡಿದ್ದು ಸರ್ಫರಾಜ್ ನಾಯಕತ್ವದ ದೊಡ್ಡ ಸಾಧನೆ.

2006ರಲ್ಲಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಮಣಿಸಿ ಪ್ರಶಸ್ತಿ ಗೆಲ್ಲುವ ಮೂಲಕ ಸರ್ಫರಾಜ್ ಮೊದಲ ಬಾರಿಗೆ ವಿಶ್ವದ ಗಮನ ಸೆಳೆದಿದ್ದರು. 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಇವರದ್ದಾಗಿದೆ.

ಡಿಸೆಂಬರ್ 2023ರಲ್ಲಿ ಕೊನೆಯ ಪಂದ್ಯವನ್ನಾಡಿದ್ದ ಇವರು, ನಂತರದ ದಿನಗಳಲ್ಲಿ ತಂಡದಿಂದ ಹೊರಗುಳಿದಿದ್ದರು. ಆದರೆ, ಕಣಕ್ಕಿಳಿಯದಿದ್ದರೂ ಪಾಕಿಸ್ತಾನ ಕ್ರಿಕೆಟ್‌ಗೆ ಅವರ ಕೊಡುಗೆ ನಿಂತಿರಲಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಅವರು ಪಾಕಿಸ್ತಾನ ಅಂಡರ್-19 ತಂಡ ಮತ್ತು ‘ಪಾಕಿಸ್ತಾನ ಶಾಹೀನ್’ ತಂಡಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಆಟಗಾರನಾಗಿ ಸುದೀರ್ಘ ಇನಿಂಗ್ಸ್ ಮುಗಿಸಿರುವ ಸರ್ಫರಾಜ್, ಇನ್ನು ಮುಂದೆ ಪೂರ್ಣ ಪ್ರಮಾಣದಲ್ಲಿ ತರಬೇತುದಾರ ಅಥವಾ ಮಾರ್ಗದರ್ಶಕನ ರೂಪದಲ್ಲಿ ಯುವ ಪ್ರತಿಭೆಗಳನ್ನು ಬೆಳೆಸುವತ್ತ ಗಮನ ಹರಿಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !