ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಸೀಸನ್ ಮಾರ್ಚ್ 28 ರಿಂದ ಅದ್ಧೂರಿಯಾಗಿ ಚಾಲನೆ ಪಡೆಯಲಿದೆ. ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಮಹತ್ವದ ಪಂದ್ಯಕ್ಕೆ ಕೇವಲ 9 ದಿನಗಳು ಬಾಕಿ ಇರುವಂತೆ ಆರ್‌ಸಿಬಿ ಪಾಳಯದಲ್ಲಿ ಭರ್ಜರಿ ತಯಾರಿ ನಡೆದಿದೆ.
ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಮೊನ್ನೆಯಷ್ಟೇ ಬೆಂಗಳೂರಿಗೆ ಆಗಮಿಸಿ ತಂಡವನ್ನು ಕೂಡಿಕೊಂಡಿದ್ದಾರೆ. ಇಂದು ನಡೆದ ಮೊದಲ ಅಭ್ಯಾಸ ಶಿಬಿರದಲ್ಲೇ ಕೊಹ್ಲಿ ತಮ್ಮ ಹಳೆಯ ಖದರ್ ತೋರಿಸಿದ್ದಾರೆ. ನೆಟ್ಸ್‌ನಲ್ಲಿ ಬ್ಯಾಟ್ ಹಿಡಿದು ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗರೆದಿದ್ದಾರೆ.
ಅಂತರರಾಷ್ಟ್ರೀಯ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಕೊಹ್ಲಿ, ಈಗ ಕೇವಲ ಏಕದಿನ ಮತ್ತು ಐಪಿಎಲ್ ಮೇಲೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಹೀಗಾಗಿ, ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿರುವ ಅವರು, ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳುವತ್ತ ಒತ್ತು ನೀಡುತ್ತಿದ್ದಾರೆ. ಅಭ್ಯಾಸದ ವೇಳೆ ಕೊಹ್ಲಿ ಬಾರಿಸಿದ ಸಿಡಿಲಬಡಿತದ ಶಾಟ್‌ಗಳು ಎದುರಾಳಿ ಬೌಲರ್‌ಗಳಿಗೆ ಈಗಲೇ ಎಚ್ಚರಿಕೆಯ ಗಂಟೆ ಬಾರಿಸಿದಂತಿದೆ.
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿಯನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಹ್ಲಿ, ಈ ಬಾರಿಯೂ ಅದೇ ಜೋಶ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 28ರಂದು ಹೈದರಾಬಾದ್ ವಿರುದ್ಧ ನಡೆಯಲಿರುವ ಮೊದಲ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಬ್ಯಾಟ್‌ನಿಂದ ಎಷ್ಟು ರನ್ ಹರಿಯಲಿದೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ.



